ಚಳಿಗಾಲದಲ್ಲಿ ಅನೇಕ ಸಣ್ಣಪುಟ್ಟ ಕಾಯಿಲೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಈ ವೇಳೆ ಎಲ್ಲಾ ವಯಸ್ಸಿನ ಜನರಲ್ಲಿ ಶೀತ ಮತ್ತು ಜ್ವರ ಸಾಮಾನ್ಯವಾಗಿರುತ್ತದೆ. ಅದರಲ್ಲಿಯೂ ಶೀತವು ಕೋವಿಡ್ನ ಸಾಮಾನ್ಯ ಲಕ್ಷಣವಾಗಿರುವುದರಿಂದ ವೈರಸ್ ತಡೆಗಟ್ಟಲು ವೈದ್ಯರು ಸ್ಟೀಮಿಂಗ್ ಅಥವಾ ಉಗಿ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತಾರೆ. ಇದಲ್ಲದೆ, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಸ್ಟೀಮ್ ಥೆರಪಿ ಒಳ್ಳೆಯದು ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗಿದೆ. ಯಾವ್ಯಾವ ಸಮಸ್ಯೆಗಳ ವಿರುದ್ಧ ಸ್ಟೀಮಿಂಗ್ ಹೋರಾಡುತ್ತದೆ ನೋಡೋಣ ಬನ್ನಿ..
ಸೈನಸೈಟಿಸ್ಗೂ ರಾಮಬಾಣ..
ಡೆಹ್ರಾಡೂನ್ ಮೂಲದ ವೈದ್ಯ ಡಾ. ಸುರ್ಜಿತ್ ಸಿಂಗ್ ಈ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದ್ದಾರೆ. ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗಳು ಸಾಮಾನ್ಯವಾಗಿ ಇರುವುದರಿಂದ ಮೂಗು ಕಟ್ಟಿಕೊಳ್ಳುತ್ತದೆ. ಸ್ಟೀಮ್ ತೆಗೆದುಕೊಳ್ಳುವುದರಿಂದ ಸರಿಯಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಅಲ್ಲದೇ ಸೈನಸೈಟಿಸ್ ಸಮಸ್ಯೆಗೂ ಇದು ಪರಿಹಾರವಾಗಿದೆ. ಸಿಹಿನೀರಿನ ಹಬೆಯು ಸೈನಸ್ ದಟ್ಟಣೆ ಮತ್ತು ಅದರೊಂದಿಗೆ ಆಗಾಗ್ಗೆ ಬರುವ ತಲೆನೋವುಗಳನ್ನು ನಿವಾರಿಸಲು ಸಹಕಾರಿ ಎಂದು ಸಿಂಗ್ ಹೇಳುತ್ತಾರೆ.
ಅಸ್ತಮಾ ರೋಗಿಗಳಿಗೂ ಉತ್ತಮ ಮಾರ್ಗ..
ಇದಲ್ಲದೆ, ಸ್ಟೀಮ್ ಥೆರಪಿ ಗಂಟಲಿನ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಆದ್ದರಿಂದ ಕೆಮ್ಮಿಗೂ ಇದು ಪರಿಹಾರವನ್ನು ನೀಡುತ್ತದೆ. ಮೂಗಿನ ದಟ್ಟಣೆಯ ಜೊತೆಗೆ, ಇದು ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಬ್ರಾಂಕೈಟಿಸ್ ಮತ್ತು ಅಸ್ತಮಾದಿಂದ ಬಳಲುತ್ತಿರುವ ಜನರು ವಾರಕ್ಕೊಮ್ಮೆ ಅಥವಾ ಆಗಾಗ್ಗೆ, ವಿಶೇಷವಾಗಿ ಚಳಿಗಾಲದಲ್ಲಿ ಸ್ಟೀಮ್ ತೆಗೆದುಕೊಳ್ಳಲು ಡಾ. ಸುರ್ಜಿತ್ ಸಿಂಗ್ ಸಲಹೆ ನೀಡುತ್ತಾರೆ.
ಅಲರ್ಜಿ ಸಮಸ್ಯೆಗೂ ಮದ್ದು..
ಬೆಚ್ಚಗಿನ ಆವಿಯನ್ನು ತೆಗೆದುಕೊಂಡು ಉಸಿರಾಡಿದಾಗ, ಆ ಆವಿ ಮೂಗಿನ ಮಾರ್ಗದ ಮೂಲಕ ಶ್ವಾಸಕೋಶವನ್ನು ತಲುಪುವಾಗ ಗಂಟಲು ಮತ್ತು ಶ್ವಾಸಕೋಶದಲ್ಲಿ ಅಂಟಿಕೊಂಡಿರುವ ಲೋಳೆಯನ್ನು ತಿಳಿಗೊಳಿಸಿ, ಕಫವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಗಂಟಲು ಅಲರ್ಜಿ ತೊಂದರೆಗೂ ಇದು ಮದ್ದು.