ನವದೆಹಲಿ: ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಈ ಮಧ್ಯೆ ಹೊಸ ಓಮಿಕ್ರಾನ್ ಉಪ ರೂಪಾಂತರವು ದೇಶದಲ್ಲಿ ಹೊಸ ಆತಂಕ ಸೃಷ್ಟಿಸುತ್ತಿದೆ. ಕೆಲವು ವರದಿಗಳ ಪ್ರಕಾರ, ಓಮಿಕ್ರಾನ್ ಉಪ ರೂಪಾಂತರ BF.7 ನ ಮೊದಲ ಪ್ರಕರಣವನ್ನು ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರವು ಪತ್ತೆಹಚ್ಚಿದೆ. ಈ ಹೊಸ ಓಮಿಕ್ರಾನ್ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗಿದ್ದು, ಬಹುಬೇಗ ಹರಡುತ್ತದೆ ಎನ್ನಲಾಗ್ತಿದೆ.
ಓಮಿಕ್ರಾನ್ ಉಪ ರೂಪಾಂತರಗಳಾದ BA.5.1.7 ಮತ್ತು BF.7 - ಚೀನಾದ ಮಂಗೋಲಿಯಾದ ಪ್ರದೇಶದಿಂದ ಬಂದಿದ್ದು, ಈಗ ಇತರ ಭಾಗಗಳಿಗೆ ಹರಡಿ ಹೊಸ ಬೆದರಿಕೆಗಳನ್ನು ಒಡ್ಡುತ್ತಿವೆ. ವರದಿಯ ಪ್ರಕಾರ, ಇತ್ತೀಚೆಗೆ ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಓಮಿಕ್ರಾನ್ ರೂಪಾಂತರಗಳಾದ BF.7 ಮತ್ತು BA.5.1.7 ಗಳೇ ಕಾರಣ ಎಂದು ಹೇಳಲಾಗ್ತಿದೆ. ಮುಂಬರುವ ಹಬ್ಬದ ಋತುವಿನಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.