ಕಣ್ಣಿನ ಸಮಸ್ಯೆ ಅಥವಾ ಫ್ಯಾಷನ್ಗಾಗಿ ಧರಿಸುವ ಕನ್ನಡಕದ ವಿಚಾರದಲ್ಲಿ ಜಾಗೃತೆ ವಹಿಸುವುದು ಅವಶ್ಯಕ. ಮುಖದ ಅಂದ ಹೆಚ್ಚಿಸುವ ಕನ್ನಡಕಗಳು ಮೂಗಿಗೆ ಭಾರವಾಗದಂತೆ ನೋಡಿಕೊಳ್ಳಬೇಕು ಎಂಬುದೂ ನಿಜ. ಹಾಗಾಗಿ, ಕನ್ನಡಕದ ಆಯ್ಕೆಯಲ್ಲಿ ಸ್ವಲ್ಪ ಹೆಚ್ಚೇ ಗಮನ ಹರಿಸಬೇಕು. ಸರಿಯಾಗಿ ಕಾಣಲು ಸಾಧ್ಯವಾಗುತ್ತಿದೆ ಎಂದ ಮಾತ್ರಕ್ಕೆ ಎಂತೆಂತೆದೋ ಕನ್ನಡಕಗಳನ್ನು ಆಯ್ಕೆ ಮಾಡುವುದು ನಿಮ್ಮ ಮುಖದ ಅಂದಗೆಡಿಸುತ್ತದೆ. ಇನ್ನಿತರ ಸಮಸ್ಯೆಗಳಿಗೂ ಕಾರಣವಾಗಬಹುದು. ಒಂದು ಚಿಕ್ಕ ಕನ್ನಡಕಕ್ಕೆ ಇಷ್ಟು ಜಾಗ್ರತೆ ಏತಕ್ಕೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಕನ್ನಡಕದ ಆಯ್ಕೆ ಹೀಗಿರಲಿ:ಕನ್ನಡಕ ಆಯ್ಕೆ ಮಾಡುವಾಗ ಮೊದಲು ಗಮನಿಸಬೇಕಾದ ಅಂಶ ಅದರ ಲೆನ್ಸ್. ಲೆನ್ಸ್ಗಳ ಮೂಲಕ ಸರಿಯಾಗಿ ನೋಡಬಹುದೇ ಎಂಬುದನ್ನು ಗಮನಿಸಿ. ಈ ಲೆನ್ಸ್ ಹೆಚ್ಚು ಭಾರವಿರದಂತೆಯೂ ಗಮನಿಸುವುದು ಅತ್ಯವಶ್ಯಕ.
ಕನ್ನಡಕದ ಲೆನ್ಸ್ ನಿಮ್ಮ ನೋಟವನ್ನು ಅಂದಗೊಳಿಸಿದರೆ, ಅದರ ಫ್ರೇಂ ನಿಮ್ಮ ಮುಖಕ್ಕೆ ಅಂದ ನೀಡುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ಮುಖದ ಆಕಾರಕ್ಕೆ ಹೊಂದುವಂತಹ ಲೆನ್ಸ್ ಆಯ್ಕೆ ಮಾಡಿಕೊಳ್ಳಿ. ಜೊತೆಗೆ ಇದು ಕನ್ನಡಕದ ಭಾರವನ್ನು ಸರಿದೂಗಿಸುತ್ತದಾ? ಮೂಗಿನ ಮೇಲೆ ಹೆಚ್ಚಿನ ಒತ್ತಡ ಹಾಕುವುದೇ ಎಂಬುದನ್ನು ಪರೀಕ್ಷಿಸಬೇಕು.
ಈ ಎರಡರ ಜೊತೆ ಅಗತ್ಯವಾಗಿರುವ ಮತ್ತೊಂದು ಅಂಶ ಎಂದರೆ, ಇವು ನಿಮ್ಮ ಚರ್ಮಕ್ಕೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂಬ ಖಾತ್ರಿ. ಕನ್ನಡಕಗಳನ್ನು ಧರಿಸಿದಾಗ ಅವು ನಿಮ್ಮ ಮೂಗಿನ ಮೇಲೆ, ಕಿವಿ ಮೇಲೆ ಒತ್ತಡ ಹಾಕುತ್ತವೆ. ಈ ವೇಳೆ ಉತ್ತಮ ಗುಣಮಟ್ಟವಲ್ಲದ ಅಥವಾ ಚರ್ಮದ ಅಲರ್ಜಿಗೆ ಫ್ರೇಂಗಳ ಮೆಟಲ್ ಕಾರಣವಾಗುತ್ತದಾ ಎಂಬುದನ್ನು ಪರೀಕ್ಷಿಸಿ. ಈ ಹಿನ್ನೆಲೆಯಲ್ಲಿ ಫ್ರೇಂಗಳ ಆಯ್ಕೆಯಲ್ಲಿ ಮುಖದ ಅಂದದ ಜೊತೆ ಚರ್ಮದ ಸೂಕ್ಷ್ಮತೆ ಕುರಿತೂ ಆಲೋಚಿಸಬೇಕು.
ಕನ್ನಡಕವನ್ನು ಅಂತಿಮವಾಗಿ ಕೊಳ್ಳುವಾಗ ಇದು ಸರಿಯಾಗಿ ನಿಮ್ಮ ಕಣ್ಣು, ಮುಖಕ್ಕೆ ಫಿಟ್ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ತುಂಬಾ ಸಡಿಲ ಹಾಗೂ ತುಂಬಾ ಬಿಗಿಯಾದ ಕನ್ನಡಕಗಳಿಂದಾಗಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಕನ್ನಡಕ ಧರಿಸುವ ಬಹುತೇಕ ಮಂದಿಯನ್ನು ಕಾಡುವ ಸಮಸ್ಯೆ ರಿಂಕಲ್ಸ್ ಅಥವಾ ಸುಕ್ಕು ಚರ್ಮ. ದೀರ್ಘಕಾಲದವರೆಗೆ ಕನ್ನಡಕ ಧರಿಸುವುದರಿಂದ ಚರ್ಮದ ಕೆಳಗೆ ಸುಕ್ಕುಗಳನ್ನು ಕಾಣಬಹುದು. ಈ ಸುಕ್ಕು ನಿವಾರಣೆಗೆ ಇನ್ನಿಲ್ಲದ ಕಸರತ್ತು ಮಾಡುವುದು ಸಾಮಾನ್ಯ. ಇದರ ನಿವಾರಣೆಗೆ ಮಾಡಬಹುದಾದ ಸರಳ ಸಲಹೆಗಳು ಇಲ್ಲಿವೆ.