ಬೆಂಗಳೂರು:ಬೇಸಿಗೆಯಲ್ಲಿ ಸಮಯ ಬಂತೆಂದರೆ ಸಾಕು ಜನರಲ್ಲಿ ಆರೋಗ್ಯದ ಕಾಳಜಿ ಜೊತೆಗೆ ಚರ್ಮದ ಕಾಳಜಿಯೂ ಹೆಚ್ಚಾಗುತ್ತದೆ. ಇದರಿಂದ ಪುರಷರು ಹೊರತಲ್ಲ. ಸುಡುವ ಬಿಸಿಲು, ಬೆವರಿನಿಂದ ಚರ್ಮ ಬಲು ಬೇಗ ಬಾಡಿ ಹೋಗುತ್ತದೆ. ಜೊತೆಗೆ ಸನ್ಬರ್ನ್ಗಳಿಂದಾಗಿ ಚರ್ಮದ ಆರೈಕೆ ಬೇಡುತ್ತದೆ. ಆದ ಕಾರಣಕ್ಕೆ ಈ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೇ ಕೆಲವು ಕಾಳಜಿ ವಹಿಸುವುದು ಅಗತ್ಯ.
ಬೇಸಿಗೆಯಲ್ಲಿ ಹೆಚ್ಚಾಗಿ ಸೂರ್ಯನ ಕಿರಣಕ್ಕೆ ಒಡ್ಡಿಕೊಳ್ಳುವ ಪುರಷರು ಕೆಲವು ಮುಂಜಾಗ್ರತೆ ವಹಿಸುವುದು ಅಗತ್ಯವಾಗುತ್ತದೆ. ಧೂಳು, ಬಿಸಿಲಿನಿಂದ ದೇಹ ಬಳಲದಂತೆ ಕಾಪಾಡಿ, ಚರ್ಮದ ಯೌವನ ಮತ್ತು ಹೊಳಪು ಕಾಪಾಡಿಕೊಳ್ಳಬೇಕಾಗುತ್ತದೆ.
ಕ್ಲೆನ್ಸಿಂಗ್: ಬಿಸಿಲಿನಿಂದ ತ್ವಚೆಯನ್ನು ಕಾಪಾಡಿಕೊಳ್ಳುವ ಮೊದಲ ಕ್ರಮ ಎಂದರೆ ಕ್ಲೆನ್ಸಿಂಗ್. ಮುಖವನ್ನು ನೀರಿನಿಂದ ಸ್ವಚ್ಛವಾಗಿ ತೊಳೆಯುವುದು ಅವಶ್ಯ. ಇದರಿಂದ ಮುಖದ ಆರೋಗ್ಯ ಕೂಡ ಹೆಚ್ಚುತ್ತದೆ. ಬಿಸಿಲಿನಿಂದ ಮನೆಗೆ ಹೋದಾಕ್ಷಣ ಚೆನ್ನಾಗಿ ಮುಖ ತೊಳೆಯುವುದು ಬಹಳ ಅವಶ್ಯಕವಾಗಿದೆ. ಇದಕ್ಕಾಗಿ ಉತ್ತಮ ಫೇಸ್ ವಾಕ್ ಆಯ್ಕೆ ಮಾಡಬಹುದು. ಅಥವಾ ಪದೇ ಪದೇ ಮುಖವನ್ನು ನೀರಿನಿಂದ ತೊಳೆಯುವುದು ಉಚಿತ. ಇದರರಿಂದ ಮುಖದಲ್ಲಿ ಅನಗತ್ಯವಾಗಿ ಕಾಣುವ ಮೊಡವೆ ಮತ್ತು ದದ್ದುಗಳನ್ನು ಕಡಿಮೆ ಮಾಡಬಹುದು.
ಜಂಕ್ ಫುಡ್ ತಪ್ಪಿಸಿ: ಜಂಕ್ಫುಡ್ಗಳು ಬಾಯಿಗೆ ರುಚಿಯನ್ನು ನೀಡಿದರೂ ಚರ್ಮ ಸೇರಿದಂತೆ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಇದನ್ನು ಪ್ರತಿಯೊಬ್ಬರು ಗಮನದಲ್ಲಿಟ್ಟುಕೊಂಡರೆ ಆರೋಗ್ಯಕ್ಕೆ ಉತ್ತಮ. ಬೇಸಿಗೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸುವ ಮೂಲಕ ನಿಮ್ಮ ಆಹಾರ ಪದ್ಧತಿಯ ಸಮತೋಲನ ಕಾಯ್ದುಕೊಳ್ಳಬೇಕಿದೆ. ಇದರಿಂದ ಮುಖದ ಕಾಂತಿ ಆಂತರಿಕವಾಗಿಯೇ ಹೊರ ಹೊಮ್ಮುತ್ತದೆ.