ಬೇಸಿಗೆಯಲ್ಲಿ ಅತಿಯಾದ ಸೂರ್ಯನ ಕಿರಣಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಅತಿಯಾದ ಶಾಖದಿಂದ ಬಳಲಿಕೆ ಉಂಟಾಗಿ ತೀರಾ ಸುಸ್ತು ಮಾಡಬಹುದು. ಹೀಗಾಗಿ ಮನೆಯಿಂದ ಹೊರಬರುವ ಮೊದಲು ನೀವೆಲ್ಲ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಏಕೆಂದರೆ ಕೆಲವೊಮ್ಮೆ ಭಾರಿ ಬಿಸಿಲು ಜೀವಕ್ಕೂ ಕುತ್ತು ತರಬಹುದು.
ಬಿಸಿಲಿನ ಪ್ರಖರತೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?:ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ಹೇಳುವ ಪ್ರಕಾರ, ಹೀಟ್ ಸ್ಟ್ರೋಕ್ ಅತ್ಯಂತ ಗಂಭೀರವಾದ ಶಾಖ - ಸಂಬಂಧಿತ ಕಾಯಿಲೆಯಾಗಿದೆ. ದೇಹವು ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಹೀಟ್ ಸ್ಟ್ರೋಕ್ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ದೇಹದ ಉಷ್ಣತೆಯು ವೇಗವಾಗಿ ಏರುತ್ತದೆ, ಬೆವರಿನ ಕಾರ್ಯವಿಧಾನವು ವಿಫಲಗೊಳ್ಳುತ್ತದೆ ಮತ್ತು ದೇಹವು ತಣ್ಣಗಾಗಲು ಸಾಧ್ಯವಾಗುವುದೇ ಇಲ್ಲ. ದೇಹದ ಉಷ್ಣತೆಯು 10 ರಿಂದ 15 ನಿಮಿಷಗಳಲ್ಲಿ 106 ° F ಅಥವಾ ಹೆಚ್ಚಿನ ಮಟ್ಟಕ್ಕೂ ಏರಬಹುದು. ತುರ್ತು ಚಿಕಿತ್ಸೆಯನ್ನು ಒದಗಿಸದಿದ್ದರೆ ಶಾಖದ ಹೊಡೆತವು ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಲೂಬಹುದು.
ಈ ಬಗ್ಗೆ ತಜ್ಞರು ಹೇಳುವುದೇನು?:ಡಾ. ಹೈದರಾಬಾದ್‌ನ ವಿಐಎನ್‌ಎನ್ ಆಸ್ಪತ್ರೆಯ ಕನ್ಸಲ್ಟೆಂಟ್ ವೈದ್ಯ ರಾಜೇಶ್ ವುಕ್ಕಲಾ ಹೇಳುವುದೇನೆಂದರೆ, ಒಬ್ಬರು ದೀರ್ಘಕಾಲದವರೆಗೆ ಹೆಚ್ಚಿನ ಶಾಖದೊಂದಿಗೆ ಇದ್ದರೆ, ಅವನು ಅಥವಾ ಅವಳು 'ಉಷ್ಣ ಬಳಲಿಕೆ'ಯನ್ನು ಎದುರಿಸಬಹುದು. ದೇಹವು ತನ್ನ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ದೇಹದ ತಾಪ ಹೆಚ್ಚಾಗುತ್ತಾ ಸಾಗುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಮತ್ತು ಸುತ್ತಮುತ್ತಲಿನ ತಾಪಮಾನವು 40ºC ಗಿಂತ ಹೆಚ್ಚಿರುವಾಗ ಇಂತಹ ಸ್ಥಿತಿ ಎದುರಾಗುತ್ತದೆ ಎಂದು ಹೇಳ್ತಾರೆ ರಾಜೇಶ್.
ಅತಿಯಾದ ತಾಪಮಾನದಿಂದಾಗುವ ಪರಿಣಾಮಗಳು: ಬೇಸಿಗೆ ಕಾಲದಲ್ಲಿ ನೇರ ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶಾಖದ ಹೊಡೆತವು ಸಾಮಾನ್ಯವಾಗಿ ದೇಹದ ಮೇಲಾಗುತ್ತದೆ ಎಂದು ಇಂದೋರ್ ಮೂಲದ ವೈದ್ಯ ಡಾ. ಸುಭಾಷ್ ಬಾತ್ರಾ ಹೇಳಿದ್ದಾರೆ. ನಿರ್ಜಲೀಕರಣದಿಂದ ಬಳಲುತ್ತಿರುವ ಜನರಲ್ಲಿ ಈ ಸಮಸ್ಯೆಯು ಹೆಚ್ಚು ಎದ್ದು ಕಾಣುತ್ತದೆ. ಅತಿಯಾದ ಸೆಕೆಯಿಂದ ಬಳಲುವ ಸಂದರ್ಭದಲ್ಲಿ, ದೇಹದ ಉಷ್ಣತೆಯು 104 ಡಿಗ್ರಿ ಫ್ಯಾರನ್‌ಹೀಟ್ ಅಥವಾ ಅದಕ್ಕಿಂತ ಹೆಚ್ಚಿಗೆ ಏರಬಹುದು. ಆಗ ಇದು ಜೀವಕ್ಕೆ ಮಾರಕವಾಗಬಹುದು ಎಂದು ಬಾತ್ರಾ ವಿವರಿಸಿದ್ದಾರೆ.
ದೇಹದಲ್ಲಿ ತಾಪಮಾನ ಹೆಚ್ಚಾದಂತೆ ಗೊಂದಲ, ತಲೆತಿರುಗುವಿಕೆ, ಪ್ರಜ್ಞಾಹೀನತೆ ಅಥವಾ ಕೋಮಾ, ತ್ವರಿತ ಹೃದಯ ಬಡಿತ, ತ್ವರಿತ ಉಸಿರಾಟ, ಒಣ ಚರ್ಮ, ಚರ್ಮದ ಕೆಂಪು, ತಲೆನೋವು, ಇತ್ಯಾದಿಗಳು ಕಂಡು ಬರಬಹುದು ಅಂತಾರೆ ವೈದ್ಯ ಬಾತ್ರಾ