ನ್ಯೂಯಾರ್ಕ್( ಅಮೆರಿಕ): ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಕಾಳಜಿವಹಿಸುವುದು ಅಗತ್ಯವಾಗಿದೆ. ಆತಂಕದ ವಿಷಯ ಎಂದರೆ, ಎಲ್ಲಾ ವಯೋಮಾನದವರಲ್ಲಿ ಹೃದಯದ ಸಮಸ್ಯೆಗಳು ಕಾಡುತ್ತಿದೆ. ಈ ಹಿನ್ನೆಲೆ ಈ ಬಗ್ಗೆ ಪ್ರತಿಯೊಬ್ಬರು ಕಾಳಜಿವಹಿಸುವುದು ಅವಶ್ಯವಾಗಿದೆ. ಸುಮಾರು ಶೇ 51ರಷ್ಟು ನಾಗರಿಕರು ತಮ್ಮ ಆಪ್ತ ವಲಯದ ಜನರಲ್ಲಿ ಅನೀಕ್ಷಿತ ಹೃದಯಾಘಾತ ಅಥವಾ ಬ್ರೈನ್ ಸ್ಟ್ರೋಕ್, ರಕ್ತ ಹೆಪ್ಪುಗಟ್ಟುವಿಕೆ, ನರಗಳ ಸಮಸ್ಯೆ, ಕ್ಯಾನ್ಸರ್ ನಂತಹ ತುರ್ತು ಆರೋಗ್ಯ ಸ್ಥಿತಿಗೆ ಕಳೆದೆರಡು ವರ್ಷದಿಂದ ಗುರಿಯಾಗುತ್ತಿದ್ದಾರೆ ಎಂದು ಸಂಶೋಧನೆಗಳು ತಿಳಿಸಿವೆ. ಹೃದ್ರೋಗ ಶಾಸ್ತ್ರಜ್ಞರ ಪ್ರಕಾರ ಜೀವನಶೈಲಿಯಿಂದಲೂ ರೋಗ ಕಾಣಿಸಿಕೊಳ್ಳಲಿದೆ. ಇದರಲ್ಲಿ ಆಹಾರ ಕೂಡ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಅಧ್ಯಯನದ ವೇಳೆ ಕಂಡುಕೊಳ್ಳಲಾಗಿದೆ.
ಕೃತಕ ಸಿಹಿಕಾರಕದ ಪರಿಣಾಮ: ಹೃದಯದ ಆರೋಗ್ಯ ಕಾಳಜಿವಹಿಸುವಲ್ಲಿ ಆಹಾರ ಕ್ರಮ ಕೂಡ ಪ್ರಮುಖವಾಗಿದೆ. ಕಡಿಮೆ ಕ್ಯಾಲೋರಿ, ಕಾರ್ಬೊಹೈಡ್ರೇಟ್ ಆಹಾರಗಳು ಹೃದಯ ಸಮಸ್ಯೆ ಮತ್ತು ಪಾರ್ಶ್ವವಾಯು ಸಮಸ್ಯೆಗೆ ಕಾರಣವಾಗುತ್ತದೆ ಎಂದು ವರದಿ ತಿಳಿಸಿದೆ. ಕೃತಕ ಸಿಹಿಕಾರಕಗಳು, ಕಡಿಮೆ ಕ್ಯಾಲೋರಿಯ ಪಾನೀಯ ಮತ್ತು ಆಹಾರಗಳು ಹೃದಯಾಘಾತ, ಪಾರ್ಶ್ವವಾಯು ಅಥವಾ ಸಾವಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ಎಚ್ಚರಿಸಿದೆ.
ಎರಿಥ್ರಿಟಾಲ್ ಸಕ್ಕರೆಯಂತೆ ಶೇಕಡಾ 70 ರಷ್ಟು ಸಿಹಿಯಾಗಿರುತ್ತದೆ. ಇದು ಮೆಕ್ಕೆಜೋಳ ಹುದುಗುವಿಕೆಯಲ್ಲಿ ಉತ್ಪತ್ತಿಯಾಗುತ್ತದೆ. ಕೃತಕ ಹಣ್ಣುಗಳನ್ನು ಸಿಹಿಗೊಳಿಸಲು ಅಥವಾ ಕಡಿಮೆ ಕ್ಯಾಲೋರಿ ಉತ್ಪನ್ನಗಳಿಗೆ ದೊಡ್ಡ ಪ್ರಮಾಣದಲ್ಲಿ ಸೇರಿಸಲು ಇದನ್ನು ಬಳಸಲಾಗುತ್ತದೆ. ಬೊಜ್ಜು ಹೊಂದಿರುವ, ಡಯಾಬೀಟಿಸ್ ಅಥವಾ ಮೆಟಾಬಾಲಿಕ್ ಸಿಂಡ್ರೋಮ್ ಹೊಂದಿರುವವರಿಗೆ ಸಕ್ಕರೆ ಅಂಶ ನಿರ್ವಹಣೆಗೆ ಟೇಬಲ್ ಸಿಹಿಗಳಿಗೆ ಪರ್ಯಾಯವಾಗಿ ಕೃತಕ ಸಿಹಿಕಾರಕಗಳನ್ನು ಬಳಕೆ ಮಾಡಲು ಮುಂದಾಗುತ್ತಾರೆ.