ಹೈದರಾಬಾದ್: ಕರ್ವಾ ಚೌತ್‌ನ ಉಪವಾಸ ಅತ್ಯಂತ ಕಷ್ಟಕರವಾದ ಉಪವಾಸ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅನೇಕ ಮಹಿಳೆಯರು ಇದನ್ನು ಒಂದು ದಿನದವರೆಗೆ ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಕೆಲವರು ದಿನದ ಆರಂಭದಿಂದ ಈ ಉಪವಾಸ ಪ್ರಾರಂಭಿಸುತ್ತಾರೆ. ಇನ್ನೂ ಕೆಲವರು ಸೂರ್ಯೋದಯ ಅಂದರೆ "ಬ್ರಾಹ್ಮಿಮುಹೂರ್ತ"ದಿಂದ ಆರಂಭಿಸುತ್ತಾರೆ.
ಕೆಲವು ಸಮುದಾಯಗಳಲ್ಲಿ ಸೂರ್ಯೋದಯಕ್ಕೂ ಮುನ್ನ ‘ಸರ್ಗಿ’ ತಿನ್ನುವ ಸಂಪ್ರದಾಯವೂ ಇದೆ. ಅದರಲ್ಲಿ ಮಹಿಳೆಯರು ಕೆಲವು ರೀತಿಯ ಆಹಾರವನ್ನು ಸೇವಿಸುತ್ತಾರೆ. ನಂತರ ಅವರು ಇಡೀ ದಿನ ಆಹಾರ ಮತ್ತು ನೀರನ್ನು ಸೇವಿಸುವುದಿಲ್ಲ. ಚಂದ್ರನ ಪೂಜೆಯ ನಂತರವೇ ಉಪವಾಸವನ್ನು ಪೂರ್ಣಗೊಳಿಸಲಾಗುತ್ತದೆ.
ಉಪವಾಸದ ನಂತರ ಹಲವು ಸಮಸ್ಯೆ: ಸಾಮಾನ್ಯವಾಗಿ ಈ ಉಪವಾಸದ ಸಮಯದಲ್ಲಿ ಅಥವಾ ನಂತರ ಅನೇಕ ಮಹಿಳೆಯರು ಸುಸ್ತು, ತಲೆನೋವು, ದೇಹದಲ್ಲಿ ಶಕ್ತಿಯ ಕೊರತೆ, ಗ್ಯಾಸ್ ಸಮಸ್ಯೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಕೆಲವೊಮ್ಮೆ ಉಪವಾಸದ ದಿನದ ನಂತರವೂ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭಗಳನ್ನು ತಪ್ಪಿಸಲು, ಕೆಲವು ಮುನ್ನೆಚ್ಚರಿಕೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ತುಂಬಾ ಪ್ರಯೋಜನಕಾರಿಯಾಗಿದೆ.
ಉಪವಾಸದ ಸಮಯದಲ್ಲಿ ಮಾತ್ರವಲ್ಲದೇ, ಮೂರ್ನಾಲ್ಕು ದಿನಗಳ ಮೊದಲು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಮಹಿಳೆಯರಿಗೆ ಹೆಚ್ಚಿನ ಸಹಾಯವಾಗುತ್ತದೆ ಎಂದು ದೆಹಲಿಯ ಹೋಮಿಯೋಪತಿ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗದ ವೈದ್ಯೆ ಡಾ. ಸಾಧನಾ ಅಗರ್ವಾಲ್ ಮಾಹಿತಿ ಹೇಳಿದ್ದಾರೆ.
ಈ ಮಹಿಳೆಯರು ಉಪವಾಸ ಮಾಡದಿದ್ರೆ ಒಳಿತು: ವಿಶೇಷವಾಗಿ ಅಸಿಡಿಟಿ, ಮಧುಮೇಹ, ರಕ್ತದೊತ್ತಡ ಅಥವಾ ಯಾವುದೇ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರು, ಗರ್ಭಿಣಿಯರು ಉಪವಾಸದ ಮೊದಲು ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕು. ಸಾಧ್ಯವಾದರೆ ಉಪವಾಸ ಆಚರಿಸದಿರುವುದು ಉತ್ತಮ. ಆದರೆ, ಅವರು ಇನ್ನೂ ವ್ರತವನ್ನು ಪಾಲಿಸುವುದರ ಬಗ್ಗೆ ಹಠ ಮಾಡುತ್ತಿದ್ದರೆ, ಅವರು ತಮ್ಮ ದೈನಂದಿನ ದಿನಚರಿ, ಆಹಾರ ಪದ್ಧತಿ ಮತ್ತು ವೈದ್ಯರು ಸೂಚಿಸುವ ಮುನ್ನೆಚ್ಚರಿಕೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಸರ್ಗಿ ಸಂಪ್ರದಾಯ ಪಾಲಿಸುವವರು ಹೀಗೆ ಮಾಡಿ:ಮತ್ತೊಂದೆಡೆ, ಮಹಿಳೆಯರು ಉಪವಾಸ ಕೊನೆಗೊಳಿಸುವ ಮೊದಲು, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸರ್ಗಿ ಸಂಪ್ರದಾಯವನ್ನು ಅನುಸರಿಸುವ ಮಹಿಳೆಯರು ಸರ್ಗಿಯ ರೂಪದಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸುತ್ತಿದ್ದಾರೆ ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಡಾ. ಸಾಧನಾ ಹೇಳುತ್ತಾರೆ. ಏಕೆಂದರೆ ಹಲವಾರು ಬಾರಿ, ಮಸಾಲೆಯುಕ್ತ ಅಥವಾ ತುಂಬಾ ಸಿಹಿಯಾದ ಆಹಾರ ಸೇವಿಸುವುದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಗ್ಯಾಸ್, ತಲೆನೋವು, ಆಲಸ್ಯ ಮತ್ತು ದೇಹದಲ್ಲಿ ಶಕ್ತಿಯ ಕೊರತೆ ಉಂಟುಮಾಡುತ್ತದೆ.