ನವದೆಹಲಿ: ಅತಿಯಾದ ಮದ್ಯ ಸೇವನೆ, ಮನರಂಜನಾ ಡ್ರಗ್ಗಳ ಬಳಕೆ ಮತ್ತು ಅತಿಯಾದ ದೈಹಿಕ ಚಟುವಟಿಕೆಗಳು ಜನರ ಹಠಾತ್ ಸಾವಿಗೆ ಕಾರಣವಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹಾಗು ರಾಷ್ಟ್ರೀಯ ಎಪಿಡೆಮಿಯೊಲಾಜಿ (ಎನ್ಐಇ) ನಡೆಸಿದ ಅಧ್ಯಯನದ ಕುರಿತು ಕೇಂದ್ರ ಆರೋಗ್ಯ ಸಚಿವ ಮಾನ್ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ.
ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದವರಲ್ಲಿ ಹಠಾತ್ ಸಾವಿನ ಪ್ರಮಾಣ ಕಡಿಮೆ ಇದೆ. ಕುಟುಂಬದ ಇತಿಹಾಸ, 48 ಗಂಟೆಗಳ ಮುಂಚೆ ಅತಿಯಾದ ಕುಡಿಯುವಿಕೆ, ಮನರಂಜನಾ ಔಷಧದ ಬಳಕೆ ಮತ್ತು ಸಾವಿಗೆ ಮುನ್ನ ಅತಿಯಾದ ದೈಹಿಕ ಚಟುವಟಿಕೆಗಳು ಸಾವಿನೊಂದಿಗೆ ಸಕಾರಾತ್ಮಕ ಸಂಬಂಧ ಹೊಂದಿವೆ. ಒಂದು ಡೋಸ್ ಲಸಿಕೆಗಿಂತ ಎರಡು ಡೋಸ್ ಲಸಿಕೆ ಪಡೆದವರಲ್ಲಿ ಈ ರೀತಿಯ ಸಾವಿನ ಅಪಾಯ ಕಡಿಮೆ ಎಂದು ಲೋಕಸಭೆಗೆ ಸಚಿವರು ತಿಳಿಸಿದರು.
ಮೇ, ಆಗಸ್ಟ್ 2023ರಲ್ಲಿ 19 ರಾಜ್ಯ/ಕೇಂದ್ರಾಡಳಿತ ಪ್ರದೇಶದ 47 ಪ್ರದೇಶದ ಆಸ್ಪತ್ರೆಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ವಯಸ್ಸು, ಲಿಂಗ ಸೇರಿದಂತೆ ನಾಲ್ಕು ನಿಯಂತ್ರಿತ ಅಂಶಗಳ ಮೇಲೆ ಪರೀಕ್ಷೆ ಮಾಡಲಾಗಿದೆ. ಕೋವಿಡ್ ಲಸಿಕೆ, ಸೋಂಕು, ಕೋವಿಡ್ ನಂತರದ ಸ್ಥಿತಿ, ಕುಟುಂಬದಲ್ಲಿ ಹಠಾತ್ ಸಾವು, ಧೂಮಪಾನ, ನಿಯಮಿತ ಆಲ್ಕೋಹಾಲ್ ಸೇವನೆ, ಅಧಿಕ ಕುಡಿತ ಮತ್ತು ಅತಿಯಾದ ದೈಹಿಕ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಲಾಗಿದೆ.