ಕ್ಯಾರೆಟ್‌ನಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದಂತೆ. ಕ್ಯಾರೆಟ್‌ನಲ್ಲಿ ದೇಹದಲ್ಲಿನ ಅಧಿಕ ಬೊಜ್ಜು ಕರಗಿಸುವ ಗುಣ ಇರುವುದರಿಂದ ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನಲಾಗ್ತಿದೆ. ಹಾಗಾಗಿ ದಿನನಿತ್ಯದ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎಲ್ಲ ರೋಗಗಳಿಗೂ ಮೂಲವಾಗಿರುವ ದೇಹದ ಅಧಿಕ ಬೊಜ್ಜನ್ನು ಕರಗಿಸಿಕೊಳ್ಳಬಹುದು.
ಕ್ಯಾರೆಟ್ ತಿನ್ನಿ, ಕಣ್ಣಿಗೆ ಒಳ್ಳೆಯದು ಎಂದು ನಮ್ಮ ಹಿರಿಯರು ನಮಗೆ ಸಲಹೆ ಕೊಡುತ್ತಿರುವುದನ್ನು ನಾವು ನೀವೆಲ್ಲ ಕೇಳಿಯೇ ಇರುತ್ತೇವೆ. ಇದರ ಸೇವನೆಯಿಂದ ಇದೊಂದೇ ಪ್ರಯೋಜನವಲ್ಲ, ಇನ್ನೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದೊಂದು ಸಡಿಲವಾದ ಮಣ್ಣಿನಲ್ಲಿ ಬೆಳೆಯುವ ಗಡ್ಡೆಯಾಗಿದ್ದು, ಕೇಸರಿ ಬಣ್ಣದಲ್ಲಿನ ಕೋನಾಕೃತಿಯ ಗಡ್ಡೆಯಾಗಿದೆ. ಇದರಲ್ಲಿ ಹಲವಾರು ಪೋಷಕಾಂಶಗಳಿದ್ದು, ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೇ ಜೀರ್ಣಾಂಗ ವ್ಯವಸ್ಥೆ, ತ್ವಚೆಯ ಆರೋಗ್ಯ, ಹೃದಯದ ಆರೋಗ್ಯ, ಮೆದುಳಿನ ಕ್ಷಮತೆ, ಎಲ್ಲದಕ್ಕೂ ಕ್ಯಾರೆಟ್ ಒಳ್ಳೆಯದು.
ಇದು ಅತ್ಯುತ್ತಮ ಚಳಿಗಾಲದ ತರಕಾರಿಯಾಗಿದ್ದು, ಇದರಿಂದ ಕ್ಯಾರೆಟ್ ಹಲ್ವಾ, ಚಪಾತಿಯೊಂದಿಗೆ ತಿನ್ನಲು ಪಲ್ಯ, ಕೇಕ್, ಪುಡಿಂಗ್, ಉಪ್ಪಿನಕಾಯಿ, ಜ್ಯೂಸ್, ಸಲಾಡ್ ಮತ್ತು ಇನ್ನೂ ಹೆಚ್ಚಿನ ರುಚಿಯಾದ ಭಕ್ಷ್ಯಗಳಿಗೆ ಬಹಳ ಜನಪ್ರಿಯವಾಗಿದೆ. ಈ ಪಾಕವಿಧಾನಗಳಲ್ಲಿ ಯಾವುದು ಆರೋಗ್ಯಕರ ಎಂದು ನಿಮಗೆ ತಿಳಿದಿದೆಯೇ?. ಇದು ತುಂಬಾ ಪೌಷ್ಠಿಕಾಂಶವನ್ನು ಹೊಂದಿರುವುದರಿಂದ ನಿಮ್ಮ ಆಹಾರದಲ್ಲಿ ಇದನ್ನು ಹೆಚ್ಚು ಬಳಸುವುದು ಒಳ್ಳೆಯದು. ಈ ಕ್ಯಾರೆಟ್‌ನಿಂದ ನಾವು ಈ ಕೆಳಗಿನ ಪೋಷಕಾಂಶಗಳನ್ನು ಪಡೆಯಬಹುದಾಗಿದೆ.
ಕ್ಯಾರೆಟ್‌ನಲ್ಲಿರುವ ಪೋಷಕಾಂಶಗಳು:
ಕ್ಯಾರೆಟ್‌ನಲ್ಲಿ ಬೀಟಾ - ಕ್ಯಾರೋಟಿನ್, ಫೈಬರ್, ಆ್ಯಂಟಿ - ಆಕ್ಸಿಡೆಂಟ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಪ್ಯಾಂಟೊಥೆನಿಕ್ ಆಮ್ಲ, ಫೋಲೇಟ್, ಪೊಟ್ಯಾಸಿಯಮ್, ಕಬ್ಬಿಣ, ತಾಮ್ರ, ರಂಜಕ, ಮೆಗ್ನೀಸಿಯಮ್, ಅಯೋಡಿನ್ ಮತ್ತು ಸೋಡಿಯಂಗಳನ್ನು ಒಳಗೊಂಡಿದೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ ಮತ್ತು ಪ್ರಯೋಜನಕಾರಿಯಾಗಿವೆ.
ಕ್ಯಾರೆಟ್ ಹಲ್ವಾದಿಂದಾಗುವ ಪ್ರಯೋಜನಗಳು:
ಕ್ಯಾರೆಟ್ ಹಲ್ವಾ ಎಂದಾಕ್ಷಣ ನಮ್ಮ ನಿಮ್ಮೆಲ್ಲರ ಬಾಯಲ್ಲಿ ನೀರು ಬರುತ್ತದೆ. ಪ್ರತಿ ಭಾರತೀಯ ಮನೆಯಲ್ಲೂ ಚಳಿಗಾಲದಲ್ಲಿ ಇದು ಬಹಳ ಜನಪ್ರಿಯವಾದ ಖಾದ್ಯವಾಗಿದೆ. ಇದು ರುಚಿಯಾದ ಸಿಹಿ ಜೊತೆಗೆ, ದೇಹಕ್ಕೆ ಪೋಷಣೆ ನೀಡುವಲ್ಲಿಯೂ ಉತ್ತಮವಾಗಿದೆ. ಕ್ಯಾರೆಟ್‌ನಲ್ಲಿ ಕಂಡು ಬರುವ ಫೀನಾಲಿಕ್ ಆಮ್ಲ ಮತ್ತು ಬೀಟಾ ಕ್ಯಾರೋಟಿನ್ ಪ್ರಮಾಣವು ಅಡುಗೆ ಮಾಡಿದ ನಂತರ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ವಿವಿಧ ಸಂಶೋಧನೆಗಳು ಹೇಳುತ್ತವೆ. ಮತ್ತೊಂದೆಡೆ, ಕ್ಯಾರೆಟ್‌ನನ್ನು ಹಾಲು ಅಥವಾ ತುಪ್ಪದೊಂದಿಗೆ ಬೇಯಿಸಿದರೆ, ಹಲ್ವಾದಲ್ಲಿನ ಕೊಬ್ಬನ್ನು ಒಳಗೊಂಡಿರುವ ಪದಾರ್ಥಗಳು, ಅದರಲ್ಲಿ "ಕ್ಯಾರೊಟಿನಾಯ್ಡ್" ಗಳ ಪ್ರಮಾಣವೂ ಹೆಚ್ಚಾಗುತ್ತದೆ. ಈ ರೀತಿಯಾಗಿ ನಮ್ಮ ದೇಹವು ಕ್ಯಾರೆಟ್‌ನಲ್ಲಿರುವ ಸಂಪೂರ್ಣ ಪೋಷಕಾಂಶಗಳನ್ನು ಪಡೆಯುತ್ತದೆ. ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಹೆಚ್ಚು ಪೌಷ್ಠಿಕಾಂಶವೆಂದು ಪರಿಗಣಿಸಲಾಗುತ್ತದೆ.
ಕ್ಯಾರೆಟ್ ಜ್ಯೂಸ್ನ ಪ್ರಯೋಜನಗಳು:
ಕ್ಯಾರೆಟ್ ಜ್ಯೂಸ್ ಸೇವನೆಯು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ನಾರಿನಂಶ ಸಮೃದ್ಧವಾಗಿರುವ ಕ್ಯಾರೆಟ್ ದೇಹದ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಬೀಟಾ ಕ್ಯಾರೋಟಿನ್ ಅದರಲ್ಲಿ ಸಾಕಷ್ಟು ಕಂಡುಬರುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ದೃಷ್ಟಿಗೆ ಪ್ರಯೋಜನವಾಗುವುದಲ್ಲದೆ, ಪ್ರತಿದಿನ 1 ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿ ಕಂಡುಬರುವ ಕ್ಯಾರೊಟಿನಾಯ್ಡ್ ಅನ್ನು ಹೃದಯ ರೋಗಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದರ ದೈನಂದಿನ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.