ತೂಕ ನಷ್ಟ ಎಂಬುದು ಎಂದಿಗೂ ಸುಲಭದ ಹಾದಿಯಲ್ಲ. ಇದಕ್ಕೆ ಸಮರ್ಪಣಾ ಮನೋಭಾವದ ಜೊತೆಗೆ ಉತ್ತಮ ಆಯ್ಕೆ ಕೂಡ ಅವಶ್ಯ. ಇದರಲ್ಲಿ ಅನೇಕ ಮಂದಿ ಸೋಲುತ್ತಾರೆ. ಇದೇ ಕಾರಣಕ್ಕೆ ಆಹಾರದಲ್ಲಿ ಎಣ್ಣೆಯ ಬಳಕೆ ನಿರ್ಬಂಧಿಸಿ, ನಿತ್ಯ ವ್ಯಾಯಾಮ ಮಾಡುತ್ತೇವೆ. ಆದರೂ ಒಂದಿಂಚೂ ತೂಕ ಕಡಿಮೆಯಾಗಿಲ್ಲ ಎಂಬ ಅಳಲನ್ನು ತೋಡಿಕೊಳ್ಳುತ್ತಾರೆ ಹಲವರು.
ಈ ಸಮಸ್ಯೆ ಅನುಭವಿಸಲು ಪ್ರಮುಖ ಕಾರಣ ಎಂದರೆ ಅವರು ತಮ್ಮ ದೇಹದ ಮಾತನ್ನು ಸರಿಯಾಗಿ ಕೇಳುತ್ತಿಲ್ಲ ಎಂದೇ ಅರ್ಥ. ತೂಕ ನಷ್ಟಕ್ಕೆ ಕೇವಲ ಆಹಾರ ನಿರ್ಬಂಧ ಮಾಡಿದರೆ ಸಾಲದು, ಅದಕ್ಕೆ ತಕ್ಕನಾಗಿ ಉತ್ತಮ ಕೊಬ್ಬು ಮತ್ತು ಪೋಷಕಾಂಶಗಳನ್ನು ನೀಡುವ ಮೂಲಕ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಬಹುದು. ಆಗ ಮಾತ್ರ ಹಾರ್ಮೋನ್ಗಳು ಸೂಕ್ತ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಜೊತೆಗೆ ನೀವು ಅಂದು ಕೊಂಡಿರುವ ಕಾರ್ಯ ಸಾಧಿಸಿ, ಉತ್ತಮ ಫಲಿತಾಂಶವನ್ನು ಪಡೆಯಬಹುದು. ಹಾಗಾದರೆ ದೇಹಕ್ಕೆ ಬೇಕಾಗುವ ಉತ್ತಮ ಆರೋಗ್ಯಕರ ಕೊಬ್ಬುಗಳು ಯಾವುದು? ಯಾವುದನ್ನು ಸೇವಿಸಬೇಕು ಎಂಬುದಕ್ಕೆ ಇಲ್ಲಿದೆ ಉತ್ತರ.
ಒಮೆಗಾ - 3: ಇದು ದೇಹದ ಊರಿಯೂತವನ್ನು ಕಡಿಮೆ ಮಾಡುತ್ತದೆ. ದೈನಂದಿನ ಆಹಾರದಲ್ಲಿ ದೇಹಕ್ಕೆ ಲಭ್ಯವಾಗುತ್ತಿದೆಯಾ ಎಂಬುದನ್ನು ಗಮನಿಸಬೇಕಿದೆ. ಇದು ದೇಹದಲ್ಲಿನ ಕೆಟ್ಟ ಕೊಬ್ಬು ಕರಗಲು ಬೇಕಾದ ಹಾರ್ಮೋನು ಅನ್ನು ಬಿಡುಗಡೆ ಮಾಡಿ, ಚಯಪಚಯನವನ್ನು ಹೆಚ್ಚಿಸುತ್ತದೆ. ಒಮೆಗಾ 3 ಹೆಚ್ಚಾಗಿ ವಾಲ್ನಟ್, ಫ್ಲೆಕ್ಸ್ಸೀಡ್ಸ್ ಮತ್ತು ಮೀನಿನಲ್ಲಿ ಲಭ್ಯವಿದೆ. ಅಗತ್ಯವಿದ್ದಲ್ಲಿ ವೈದ್ಯರು ಇದಕ್ಕೆ ಪೂರಕಗಳನ್ನು ಕೂಡ ಸೂಚಿಸುತ್ತಾರೆ.
ಫೈಬರ್: ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಹ ಅನುಭವ ನೀಡುವ ಇದು ನಿಮಗೆ ಬೇಗ ಹಸಿವು ಆಗುವುದನ್ನು ತಪ್ಪಿಸುತ್ತದೆ. ಜೊತೆಗೆ ಫೈಬರ್ ಸರಿಯಾದ ಹಾರ್ಮೋನ್ಗಳ ಬಿಡುಗಡೆಗೆ ಸಹಾಯ ಮಾಡುವ ಜೊತೆಗೆ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.