ನವದೆಹಲಿ: ಪ್ರವಾಸ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇನ್ನು ಬೇಸಿಗೆ ರಜೆ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆ ಯೋಚನೆ ಮಾಡುವುದು ಸಹಜ. ಈ ವೇಳೆ ಎದುರಾಗುವ ಪ್ರಶ್ನೆ ಎಲ್ಲಿಗೆ ಹೋಗುವುದು ಎಂಬುದಾಗಿದೆ. ಈ ಸಂಬಂಧ ಡಿಜಿಟಲ್ ಪ್ರವಾಸಿ ಜಾಲತಾಣವಾಗಿರುವ ಅಗೋಡಾ ಸಮೀಕ್ಷೆ ನಡೆಸಿದೆ. ಇದರ ಅನುಸಾರ ಬಹುತೇಕ ಭಾರತೀಯರು ಅಚ್ಚುಮೆಚ್ಚಿನ ಪ್ರವಾಸಿ ತಾಣ ಗೋವಾ ಆಗಿದೆ.
ಟಾಪ್ 5 ಪ್ರವಾಸಿ ತಾಣಗಳು ಇವಂತೆ: ದೇಶಿಯವಾಗಿ ಅಂದರೆ, ಭಾರತದೊಳಗಿನ ಜನರ ಅಚ್ಚುಮೆಚ್ಚಿನ ಪ್ರವಾಸಿತಾಣದಲ್ಲಿ ಗೋವಾ ಮೊದಲನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ನವದೆಹಲಿ ಮತ್ತು ಎನ್ಸಿರ್ ಇದ್ದು, ಬಳಿಕದ ಸ್ಥಾನದಲ್ಲಿ ಮುಂಬೈ, ಪಾಂಡೀಚೆರಿ ಹಾಗೂ ಜೈಪುರ ಇದೆಯಂತೆ. ಇವು ದೇಶದ ಐದು ಜನಪ್ರಿಯ ತಾಣಗಳಾಗಿವೆ. ಇನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣದಲ್ಲಿ ಭಾರತೀಯರ ಅಚ್ಚುಮೆಚ್ಚಿನ ದೇಶ ದುಬೈ ಆಗಿದೆ. ನಂತರದಲ್ಲಿ ಸಿಂಗಾಪೂರ್, ಮಾಲ್ಡೀವ್ಸ್, ಇಂಡೋನೇಷ್ಯಾದ ಬಾಲಿ ಮತ್ತು ಥಾಯ್ಲೆಂಡ್ನ ಪುಕೆಟ್ ಇದೆ.
ಇವು ಪ್ರಮುಖವಾಗಿ ಗಮನ ಸೆಳೆಯುವ ಅಂಶ: ದೇಶಿಯವಾಗಿ ಸಾಮಾನ್ಯ ಪ್ರವಾಸಿತಾಣಗಳಲ್ಲಿ ಗೋವಾ ಮೊದಲ ಸ್ಥಾನದಲ್ಲಿರಲು ಕಾರಣ ಅಲ್ಲಿನ ಬೀಚ್ ಜೊತೆಗೆ ಪ್ರವಾಸಿ ಕುಟುಂಬಗಳಿಗೆ ನೀಡುವ ಅತ್ಯುತ್ತಮ ಆಫರ್ಗಳಾಗಿವೆ. ಇನ್ನು ನವದೆಹಲಿ ಮತ್ತು ಮುಂಬೈ ಸೈಟ್ ಸೀಯಿಂಗ್ಗಾಗಿ ಹೆಚ್ಚಿನ ಜನರು ಭೇಟಿ ನೀಡಲು ಇಷ್ಟ ಪಡುತ್ತಾರಂತೆ. ಪಾಂಡೀಚೆರಿಯ ಪ್ರಶಾಂತ ಸೌಂದರ್ಯ ಎಲ್ಲರನ್ನು ಸೆಳೆದರೆ, ಜೈಪುರ ತನ್ನ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯಿಂದಾಗಿ ಮನಸೆಳೆಯುತ್ತದೆ.
ಅಂತಾರಾಷ್ಟ್ರೀಯ ಪ್ರವಾಸದಲ್ಲೂ ಕೂಡ ಜನರು ಸಮುದ್ರ ಕಿನಾರೆ, ಉತ್ತಮ ಸೌಕರ್ಯ ಹೊಂದಿರುವ ಪ್ರದೇಶಗಳಿಗೆ ಆದ್ಯತೆ ನೀಡುತ್ತಾರೆ. ದುಬೈನಲ್ಲಿನ ಐಷಾರಾಮಿ ಸ್ಥಳಗಳು ಹೆಚ್ಚಿನ ಕುಟುಂಬಗಳನ್ನು ಆಕರ್ಷಿಸುತ್ತವೆ ಎನ್ನುತ್ತಾರೆ.
ಸಮೀಕ್ಷೆ ಮಾಹಿತಿ: ಈ ಸಂಬಂಧ ಅಗೋಡಾ ಫ್ಯಾಮಿಲಿ ಟ್ರಾವೆಲ್ ಟ್ರೆಂಡ್ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯಲ್ಲಿ 14 ಸಾವಿರ ಪ್ರವಾಸಿ ಕುಟುಂಬಗಳು ಭಾಗಿಯಾಗಿವೆ. ಈ ಸಮೀಕ್ಷೆಯಲ್ಲಿ ಸಮುದ್ರದ ಕಿನಾರೆಯಲ್ಲಿ ವಿಶ್ರಮಿಸಿ, ಉತ್ತಮ ಸಮಯ ಕಳೆಯಲು ಇಚ್ಛಿಸುವುದಾಗಿ ತಿಳಿಸಿದ್ದಾರೆ. ಕುಟುಂಬದೊಂದಿಗೆ ಪ್ರವಾಸ ನಡೆಸುವಾಗ ಸಮುದ್ರದ ಕಿನಾರೆ ಹೊಂದಿರುವ ಪ್ರದೇಶಗಳನ್ನು ಆಯ್ಕೆ ಮಾಡಿ, ಉತ್ತಮ ಸಮಯ ಕಳೆಯಲು ಇಚ್ಛಿಸುವುದಾಗಿ ಜನರು ತಿಳಿಸಿದ್ದಾರೆ ಎಂದು ಅಗೋಡ ಇಂಡಿಯಾ ಕಂಟ್ರಿ ಡೈರೆಕ್ಟರ್ ಕೃಷ್ಣ ರತಿ ತಿಳಿಸಿದ್ದಾರೆ.
ಎಲ್ಲ ವಯೋಮಾನದವರೊಂದಿಗೆ, ಬಜೆಟ್ನೊಂದಿಗೆ ಪ್ರವಾಸ ಯೋಜಿಸುವುದು ದೊಡ್ಡ ಸವಾಲಿನ ಕೆಲಸ. ಇದೇ ಕಾರಣಕ್ಕೆ ಅಗೋಡ, ಈ ಪ್ರಯಾಣವನ್ನು ಉತ್ತಮವಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಕೌಟುಂಬಿಕ ಪ್ರವಾಸದ ವೇಳೆ ಲಾಡ್ಜಿಂಗ್ ರೀತಿಯ ವ್ಯವಸ್ಥೆಯನ್ನು ಬಹುತೇಕ ಮಂದಿ ಇಷ್ಟಪಡುವುದಿಲ್ಲ. ಕೆಲವು ಕುಟುಂಬಗಳು ಕಿಡ್ಸ್ ಕ್ಲಬ್ ಹೊಂದಿರುವ ಹೋಟೆಲ್ ಅಥವಾ ಫ್ಯಾಮಿಲಿ ರೂಂ ಹೊಂದಿರುವ ಹೋಟೆಲ್, ಅಡುಗೆ ಕೋಣೆ ಸೇರಿದಂತೆ ಕುಟುಂಬಕ್ಕೆ ಅನುಕೂಲವಾಗುವ ಸೌಕರ್ಯ ಹೊಂದಿರುವ ವಿಲ್ಲಾಗಳು, ರೆಸಾರ್ಟ್ಗಳ ಮೊರೆ ಹೋಗುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಇದನ್ನು ಓದಿ: ಬಾಡಿಗೆ ಆದಾಯದಿಂದ ತೆರಿಗೆ ಉಳಿಸುವುದು ಹೇಗೆ: ಇಲ್ಲಿದೆ ಪರಿಹಾರ!