ಗರ್ಭಿಣಿಯರು ಎದುರಿಸುತ್ತಿರುವ ಪ್ರಮುಖ ಆರೋಗ್ಯದ ಸವಾಲಿನಲ್ಲಿ ಮಧುಮೇಹವೂ ಒಂದು. ಈ ಹಿಂದೆ ಯಾವುದೇ ಮಧುಮೇಹದ ಇತಿಹಾಸವನ್ನು ಹೊಂದಿರದಿದ್ದರೂ ಗರ್ಭಾವಸ್ಥೆಯಲ್ಲಿ ಕೆಲವರಿಗೆ ಮಧುಮೇಹ ವರದಿಯಾಗುತ್ತದೆ. ಹೆರಿಗೆಯಾದ ಬಳಿಕ ಈ ಮಧುಮೇಹ ಕಣ್ಮರೆಯಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಗರ್ಭಾವಸ್ಥೆಯ ಮಧುಮೇಹ ಎಂದು ಕರೆಯಲಾಗುವುದು. ಈ ಪರಿಸ್ಥಿತಿಯನ್ನು ಎದುರಿಸುವಾಗ ಆಹಾರ ಪದ್ಧತಿ ಸೇರಿದಂತೆ ಚಿಕಿತ್ಸೆಗಳಲ್ಲಿ ವೈದ್ಯರ ಸಲಹೆ ಪಾಲಿಸುವುದು ಅಗತ್ಯವಾಗಿದೆ. ಪೋಷಕಾಂಶ ತಜ್ಞರು, ಈ ಸಲಹೆಯಿಂದ ಹೊರ ಬರಲು ಕೆಲವು ಆಹಾರ ಪದ್ಧತಿಯ ನಿಯಮಗಳನ್ನು ತಿಳಿಸಿದ್ದಾರೆ.
ಗರ್ಭಾವಸ್ಥೆಯ ಸಮಯದಲ್ಲಿ ಮಧುಮೇಹ ಕಂಡುಬಂದಲ್ಲಿ ಮಹಿಳೆಯರು ಹೆಚ್ಚಾಗಿ ಫೈಬರ್ ಹೊಂದಿರುವ ಸಮೃದ್ಧ ಆಹಾರವನ್ನು ಸೇವಿಸಬೇಕು. ಬೇಳೆ ಕಾಳು, ಹಣ್ಣು ಮತ್ತು ತರಕಾರಿಗಳಲ್ಲಿ ಫೈಬರ್ ಯಥೇಚ್ಛ ಮಟ್ಟದಲ್ಲಿ ಲಭ್ಯವಾಗುತ್ತದೆ. ಇದು ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇರಿಸಿ, ಶಕ್ತಿಯನ್ನು ನೀಡುತ್ತದೆ.
ನೀವು ಸೇವಿಸುವ ಆಹಾರವೂ ಹೆಚ್ಚಿನ ಪ್ರೋಟಿನ್ ಹೊಂದಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೀನು, ಕೋಳಿ ಮುಂತಾದವುಗಳಲ್ಲಿ ಹೆಚ್ಚಿನ ಪ್ರೋಟಿನ್ ಅಂಶ ಇರುತ್ತದೆ.
ಆರೋಗ್ಯಯುತ ಕೊಬ್ಬಿನ ಆಹಾರವನ್ನು ಸೇವಿಸಿ, ಒಣ ಹಣ್ಣುಗಳು, ಆಲಿವ್ ಎಣ್ಣೆಯನ್ನು ಸೇವಿಸಬೇಕು. ಇದು ಇನ್ಸುಲಿನ್ ಅನ್ನು ಅಭಿವೃದ್ಧಿ ಮಾಡುತ್ತದೆ. ಜೊತೆಗೆ ಇದು ಹೃದಯದ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಿ. ಯೋಗರ್ಟ್, ಚೀಸ್ನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುತ್ತದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುವ ಜೊತೆಗೆ ತಾಯಿ ಮೂಳೆ ಬಲವರ್ಧನೆಗೂ ಅವಶ್ಯಕ. ಹಾಗೇ ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಹೂಕೋಸ್, ಪಾಲಕ್ ಸೊಪ್ಪು, ಬ್ರಾಕೋಲಿ ಮತ್ತು ದಪ್ಪ ಮೆಣಸಿನ ಕಾಯಿಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಇದ್ದು, ಹೆಚ್ಚಿನ ವಿಟಮಿನ್ ಮತ್ತು ಮಿನರಲ್ಸ್ ಇರುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸುತ್ತದೆ.
ಎಣ್ಣೆಯಲ್ಲಿ ಕರಿದ ಆಹಾರ, ಪೇಸ್ಟ್ರಿ, ಬಿಳಿ ಬ್ರೆಡ್, ಅಧಿಕ ಉಪ್ಪಿನ ಆಹಾರ, ಜಂಕ್ ಆಹಾರ ಮತ್ತು ಅಧಿಕ ಕೊಬ್ಬು ಹೊಂದಿರುವ ಡೈರಿ ಉತ್ಪನ್ನಗಳನ್ನು ಸೇವಿಸದೇ ಇರುವುದು ಉತ್ತಮ. ಏಕೆಂದರೆ ಇವು ಕೂಡ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ.
ಗರ್ಭಾವಸ್ಥೆಯ ಮಧುಮೇಹ: ಗರ್ಭಾವಸ್ಥೆಯಲ್ಲಿ ಮಹಿಳೆಯರ ರಕ್ತದ ಗ್ಲುಕೋಸ್ ಮಟ್ಟವು ಹೆಚ್ಚಾಗುತ್ತದೆ. ಹಾರ್ಮೋನ್ಗಳ ಬದಲಾವಣೆಯಿಂದ ಈ ಸಮಯದಲ್ಲಿ ಮಧುಮೇಹ ಅನೇಕರಲ್ಲಿ ಕಂಡು ಬರುತ್ತದೆ. ಮಧುಮೇಹ ಸಾಮಾನ್ಯವಾಗಿ 20-24ನೇ ವಾರದಲ್ಲಿ ಪತ್ತೆಯಾಗುತ್ತದೆ. ರಕ್ತದಲ್ಲಿ ಅತಿ ಹೆಚ್ಚಿನ ಗ್ಲುಕೋಸ್ ಪ್ರಮಾಣ ಪತ್ತೆಯಾಗುವುದು ತಾಯಿಗೆ ಜೊತೆಗೆ ಹುಟ್ಟಲಿರುವ ಮಗುವಿನ ಮೇಲೆ ಅನೇಕ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ಈ ಹಿನ್ನೆಲೆ ವೈದ್ಯರಿಂದ ಚಿಕಿತ್ಸೆ ಪಡೆದು, ಸಮಾಲೋಚನೆ ನಡೆಸುವುದು ಅಗತ್ಯ. ಅನೇಕ ಮಂದಿಗೆ ಹೆರಿಗೆ ಬಳಿಕ ಈ ಮಧುಮೇಹ ಕಣ್ಮರೆಯಾಗುತ್ತದೆ. ಒಂದು ವೇಳೆ ಹೆರಿಗೆ ಬಳಿಕವೂ ಮಹಿಳೆಯರಲ್ಲಿ ಮಧುಮೇಹ ಮುಂದುವರೆದರೆ ಅದನ್ನು ಟೈಪ್ 2 ಮಧುಮೇಹ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:Pregnancy Hypertension: ಗರ್ಭಿಣಿಯರಲ್ಲಿ ಕಾಡುವ ಅಧಿಕ ರಕ್ತದೊತ್ತಡದ ಬಗ್ಗೆ ತಿಳಿಯಲೇಬೇಕಾದ ವಿಚಾರಗಳಿವು