ನವದೆಹಲಿ:ಇಂದಿನ ಮಕ್ಕಳಲ್ಲಿ ಆನ್ಲೈನ್ ಬಳಕೆ ಸಾಮಾನ್ಯವಾಗಿದೆ. ಇಂತಹ ಆನ್ಲೈನ್ ತಾಣಗಳನ್ನು ಬಳಸುವ ಮಕ್ಕಳ ಸ್ನೇಹ ಬಯಸಿ, ಗುರುತು ಪರಿಚಯವಿರದ ವ್ಯಕ್ತಿಗಳು ಸಂಪರ್ಕಿಸುವ ಸಂಖ್ಯೆ ಹೆಚ್ಚಿದೆ. ಇವರು ವೈಯಕ್ತಿಕ ಮತ್ತು ಕುಟುಂಬದ ಮಾಹಿತಿ ಪಡೆಯುವುದರೊಂದಿಗೆ ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಈ ವರದಿ ಅನುಸಾರ, ಸಮೀಕ್ಷೆಯಲ್ಲಿ 424 ಮಂದಿ ಪೋಷಕರು ಭಾಗಿಯಾಗಿದ್ದು, ಶೇ 33ರಷ್ಟು ಪೋಷಕರು ಕೂಡ ತಮ್ಮ ಮಕ್ಕಳನ್ನು ಆನ್ಲೈನ್ ಮೂಲಕ ಅಪರಿಚಿತರು ಸಂಪರ್ಕಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ ಸೇರಿ ಹಲವು ರಾಜ್ಯದಲ್ಲಿ ಸಮೀಕ್ಷೆ: 424 ಪೋಷಕರ ಹೊರತಾಗಿ ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶದ 384 ಮಂದಿ ಶಿಕ್ಷಕರು ಸೇರಿದಂತೆ ಮೂರು ರಾಜ್ಯಗಳ 107 ಮಂದಿ ಮಧ್ಯವರ್ತಿಗಳು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಪೋಷಕರ ಮಾಹಿತಿಯಂತೆ ಆನ್ಲೈನ್ನಲ್ಲಿ 14-18 ವರ್ಷದ ಶೇ 40ರಷ್ಟು ಹೆಣ್ಣು ಮಕ್ಕಳಿಗೆ ಆನ್ಲೈನ್ನಲ್ಲಿ ಸ್ನೇಹ ಮತ್ತು ನಿಂದನೆಗಳು (ಒಸಿಎಸ್ಇಎ) ಕೇಳಿಬಂದಿದ್ದರೆ, ಇದೇ ವಯೋಮಾನದ ಶೇ 33 ಗಂಡು ಮಕ್ಕಳಿಗೆ ಈ ರೀತಿಯ ಸ್ನೇಹದ ಕೋರಿಕೆಗಳು ಆನ್ಲೈನ್ನಲ್ಲಿ ಬರುತ್ತಿದೆ. ಮಕ್ಕಳ ಮೇಲೆ ಆನ್ಲೈನ್ನಲ್ಲಿ ಆಗುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ನಿಂದನೆ ಕುರಿತು ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ.
ಮಾಹಿತಿ ಒಪ್ಪಿಕೊಂಡ ಪೋಷಕರು: ಈ ಕುರಿತು ಸಿಆರ್ವೈ (ಮಕ್ಕಳ ಹಕ್ಕು ಮತ್ತು ನೀವು) ಹಾಗೂ ಪಾಟ್ನಾದ ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಜಂಟಿ ಸಮೀಕ್ಷೆ ನಡೆಸಿದೆ. ಈ ಅಧ್ಯಯನಲ್ಲಿ ಮೂರನೇ ಒಂದು ಭಾಗದಷ್ಟು ಪೋಷಕರು ತಮ್ಮ ಮಕ್ಕಳಿಗೆ ಆನ್ಲೈನ್ನಲ್ಲಿ ಅಪರಿಚಿತರು ಸ್ನೇಹದ ಕೋರಿಕೆ ಇಡುತ್ತಿದ್ದಾರೆ. ಅಲ್ಲದೇ ಕುಟುಂಬ ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಜೊತೆಗೆ ಸಂಬಂಧಗಳ ಕುರಿತು ಲೈಂಗಿಕ ಸಲಹೆಯನ್ನೂ ನೀಡುತ್ತಿದ್ದಾರೆ. ಜೊತೆಗೆ, ಅನುಚಿತ ಲೈಂಗಿಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.