ನವದೆಹಲಿ: ಋತುಮಾನದ ಬದಲಾವಣೆಗಳು ಅನೇಕ ಅನಾರೋಗ್ಯ ಸವಾಲುಗಳನ್ನು ತಂದೊಡ್ಡುತ್ತವೆ. ಇದರಲ್ಲೊಂದು ಜೀರ್ಣಾಂಗವ್ಯೂಹದ ಬಾಧೆಗಳು. ಅಂದರೆ ಹೊಟ್ಟೆ ಜ್ವರ ಮತ್ತು ಫುಡ್ ಪಾಯ್ಸನ್. ಇವೆರಡೂ ಕೂಡಾ ಸಾಮಾನ್ಯ ಗುಣಲಕ್ಷಣ ಹೊಂದಿವೆ. ಆದರೆ ಎರಡರ ನಡುವೆ ಭಿನ್ನತೆ ಇದೆ.
ಹೊಟ್ಟೆ ಜ್ವರ ಎಂದರೇನು?: ಸ್ಟಮಕ್ ಫ್ಲೂ ಅಥವಾ ಹೊಟ್ಟೆ ಜ್ವರ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ್ದಾಗಿದೆ. ಪ್ರಾಥಮಿಕವಾಗಿ ವೈರಲ್ ಸೋಂಕಿನಿಂದ ಉಂಟಾಗುತ್ತದೆ. ನೊರೊವೈರಸ್, ರೊಟೊ ವೈರಸ್, ಅಡೆನೊವರಸ್ ಇದಕ್ಕೆ ಪ್ರಮುಖ ಕಾರಣ. ಈ ವೈರಸ್ಗಳು ಬಲುಬೇಗ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹರಡುತ್ತವೆ. ಸೋಂಕಿತ ಆಹಾರ/ ನೀರು ಅಥವಾ ಕಲುಷಿತ ಆಹಾರ ಸ್ಪರ್ಶಿಸಿ ಬಾಯಿ ಸೇರುವುದರಿಂದಲೂ ಇದು ಉಂಟಾಗುತ್ತದೆ. ಹೊಟ್ಟೆ ಅಥವಾ ಕರುಳಿನಲ್ಲಿ ಊರಿಯೂತ ಸಂಭವಿಸುವುದು ಆರಂಭಿಕ ಲಕ್ಷಣ. ಇದು ಋತುಮಾನದ ಜ್ವರವಾಗಿದ್ದು, ಉಸಿರಾಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಫುಡ್ ಪಾಯ್ಸನ್ ಎಂದರೇನು?: ಕಲುಷಿತ ಆಹಾರ/ ದ್ರವಗಳ ಸೇವನೆಯಿಂದ ಉಂಟಾಗುತ್ತದೆ. ಹಾನಿಕಾರಕ ಬ್ಯಾಕ್ಟೀರಿಯಾ, ಪ್ಯಾರಾಸೈಟ್ಸ್, ವಿಷ ಅಥವಾ ರಾಸಾಯನಿಕಗಳಿಂದ ಉದ್ಭವಿಸುತ್ತದೆ. ಆಹಾರ ಉತ್ಪಾದನೆ, ಪ್ರಕ್ರಿಯೆ/ ನಿರ್ವಹಣೆಯ ವೇಳೆ ಕಲುಷಿತದಿಂದಾಗಿ ಸಂಭವಿಸುತ್ತದೆ. ಸಲ್ಮೊನೆಲ್ಲಾ, ಇ ಕೊಲಿ ಮತ್ತು ಕ್ಯಾಪೆಲೊಬ್ಯಾಕ್ಟರ್ಗಳು ಫುಡ್ ಪಾಯ್ಸನ್ ತಗಲಿಸುವ ಪ್ರಮುಖ ಬ್ಯಾಕ್ಟೀರಿಯಾಗಳು. ಈ ಬ್ಯಾಕ್ಟೀರಿಯಾಗಳು ದೇಹದಲ್ಲಿ ವಿಷಾಂಶ ಉತ್ಪಾದಿಸುತ್ತವೆ.
ಲಕ್ಷಣಗಳು:
ಹೊಟ್ಟೆ ಜ್ವರ: ತಲೆತಿರುಗುವಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು, ಕಡಿಮೆ ಮಟ್ಟದ ಜ್ವರ.
ಫುಡ್ ಪಾಯ್ಸನ್: ತಲೆ ಸುತ್ತುವಿಕೆ, ಅತಿಸಾರ, ಹೊಟ್ಟೆ ನೋವು, ಜ್ವರ, ಸ್ನಾಯು ನೋವು.