ಜ್ವರದ ಸೋಂಕುಗಳು ಪ್ರತಿಯೊಬ್ಬರನ್ನು ಕಾಡುವುದು ಸಾಮಾನ್ಯ. ಆದರೆ, ವಿಪರೀತವಾದ ಜ್ವರದ ಸೋಂಕುಗಳು ಹೃದಯಾಘಾತಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಜ್ವರ ಬರುವುದಕ್ಕೆ ಮುಂಚಿನ ಸಮಯಕ್ಕೆ ಹೋಲಿಕೆ ಮಾಡಿದರೆ, ಜ್ವರ ಬಂದ ಬಳಿಕ ಹೃದಯಾಘಾತದ ಅಪಾಯ ಆರು ಪಟ್ಟು ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ. ನೆದರ್ಲ್ಯಾಂಡ್ನ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಈ ಸಂಶೋಧನೆ ನಡೆಸಿದ್ದು, ಲಸಿಕೆ ಚುಚ್ಚುಮದ್ದಿಗೆ ಅಧ್ಯಯನ ಒತ್ತು ನೀಡುತ್ತದೆ.
ನಿರ್ಲಕ್ಷ್ಯ ಬೇಡ: ಲಸಿಕೆ ಸೇರಿದಂತೆ ಇನ್ಫ್ಲುಯಂಜಾ ಸೋಂಕು ತಡೆಗಟ್ಟುವ ತಂತ್ರವನ್ನು ಅಧ್ಯಯನ ಅನುಮೋದಿಸುತ್ತದೆ. ಜ್ವರ ಹೆಚ್ಚಾದ ಸಂದರ್ಭದಲ್ಲಿ ವ್ಯಕ್ತಿಯ ಆರೋಗ್ಯ ಲಕ್ಷಣಗಳಲ್ಲಿ ಹೃದಯಾಘಾತದ ಸಂಕೇತಗಳು ಕಾಣಬಹುದು. ಈ ಹಿನ್ನೆಲೆಯಲ್ಲಿ ಹೃದಯಾಘಾತದ ಲಕ್ಷಣಗಳ ಕುರಿತು ಜ್ವರದಿಂದ ಚೇತರಿಕೆ ಕಂಡ ರೋಗಿಗಳಲ್ಲಿ ಜಾಗೃತಿ ಮೂಡಿಸಲು ವೈದ್ಯರು ಮುಂದಾಗಬೇಕು. ಈ ಸಂಬಂಧ ಅವಧಿ ಪೂರ್ವವಾಗಿ ಸಲಹೆ ನೀಡಬೇಕು ಎಂದು ಅಧ್ಯಯನದಲ್ಲಿ ಭಾಗಿಯಾಗಿದ್ದ ಪ್ರಮುಖ ಲೇಖಕ ಡಾ.ಅನ್ನೆಮರ್ಜಿನ್ ಡೆ ಬೊರ್ ಹೇಳುತ್ತಾರೆ.
ಇನ್ನು ಕಡಿಮೆ ಪ್ರಮಾಣದ ಜ್ವರ ಕೂಡ ಹೃದಯಾಘಾತದೊಂದಿಗೆ ಸಂಬಂಧ ಹೊಂದಿದ್ದು, ಎಷ್ಟು ಅಪಾಯವಿದೆ ಎಂಬುದರ ಬಗ್ಗೆ ವರದಿ ಸ್ಪಷ್ಟವಾಗಿ ಹೇಳಿಲ್ಲ. ಹೆಚ್ಚು ಜ್ವರದಿಂದ ಬಳಲುತ್ತಿರುವಾಗ ಹೃದಯಕ್ಕೆ ರಕ್ತದ ಪೂರೈಕೆಯಲ್ಲಿ ವ್ಯತ್ಯಾಯವಾಗುವ ಹಿನ್ನೆಲೆಯಲ್ಲಿ ಹೃದಯಾಘಾತಕ್ಕೂ ಕಾರಣವಾಗಬಹುದು. ಭಾರತದಲ್ಲಿ ಎಚ್3ಎನ್2 ಸೋಂಕಿನಿಂದ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಮಾಹಿತಿ ಹೊರಬಿದ್ದಿದೆ.