ಹೈದರಾಬಾದ್: ಅಸ್ತಮಾ ರೋಗ ನಿವಾರಣೆಗೆ ಇಲ್ಲಿ ನೀಡಲಾಗುವ ಪ್ರಸಿದ್ಧ ಮೀನಿನ ಪ್ರಸಾದ ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿದೆ. ಪ್ರತಿವರ್ಷ ಮೃಗಶಿರಕಾರ್ತಿಕದಂದು ಇಲ್ಲಿ ಮೀನಿನ ಪ್ರಸಾದವನ್ನು ನೀಡಲಾಗುತ್ತದೆ. ಅದರಂತೆ ನಾಳೆ ಮುತ್ತಿನನಗರಿಯಲ್ಲಿ ಈ ಪ್ರಸಾದ ವಿತರಣೆ ನಡೆಯಲಿದ್ದು, ಮೃಗಶಿರ ಕಾರ್ತಿಕ ಹಬ್ಬದಂದು ಬಥಿನಿ ಕುಟುಂಬ ನೀಡುವ ಪ್ರಸಾದಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಸುಮಾರು 5 ಲಕ್ಷ ಜನರಿಗೆ ಈ ಪ್ರಸಾದ ವಿನಿಮಯ ಆಗಲಿದೆ.
ಇಲ್ಲಿನ ಬಥಿನಿ ಕುಟುಂಬ ನೀಡುವ ನಾಟಿ ಮಿಶ್ರಿತ ಮೀನು ಸೇವನೆಯಿಂದ ಅಸ್ತಮ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ದೇಶ ವಿದೇಶದ ಜನರು ಕೂಡ ಮುಗಿ ಬೀಳುತ್ತಾರೆ. ಇದೀಗ ಕೋವಿಡ್ ಬಳಿಕ ಮೂರು ವರ್ಷದ ನಂತರ ಬಥಿನಿ ಕುಟುಂಬ ಪ್ರತಿ ವರ್ಷದಂತೆ ಮೀನಿನ ಪ್ರಸಾದ ನೀಡಲು ಮುಂದಾಗಿದೆ. ಇದಕ್ಕೆ ಜನರು ಮುಗಿ ಬೀಳುವ ಹಿನ್ನೆಲೆ ಯಾವುದೇ ತೊಂದರೆಗಳು ಎದುರಾಗದಂತೆ ಸಚಿವ ತಲಸನಿ ಶ್ರೀನಿವಾಸ್ ಯಾದವ್ ಮತ್ತು ಜಿಲ್ಲಾಧಿಕಾರಿ ಅಮೊಯ್ ಕುಮಾರ್ ಹಾಗೂ ಸರ್ಕಾರದ ಕೆಲ ಇಲಾಖೆಗಳಿಂದ ವ್ಯವಸ್ಥೆಯನ್ನು ಮಾಡಲಾಗಿದೆ.
ಸಕಲ ಸಿದ್ಧತೆ: ಎರಡು ದಿನಗಳ ಈ ಕಾರ್ಯಕ್ರಮದಲ್ಲಿ 5 ಲಕ್ಷ ಜನರಿಗೆ 5 ಕ್ವಿಂಟಾಲ್ ಪ್ರಸಾದ ವಿತರಣೆ ಆಗಲಿದೆ. ಮೀನುಗಾರಿಕೆ ಇಲಾಖೆ ಈಗಾಗಲೇ 2.5 ಲಕ್ಷ ಕೊರ್ರಮೀನು ಸಿದ್ಧಪಡಿಸಿದೆ. ಇಲ್ಲಿ ಸಸ್ಯಹಾರಿಗಳಿಗೂ ಬೆಲ್ಲದ ಮೂಲಕ ಮೀನಿನ ಪ್ರಸಾದ ನೀಡಲಾಗುವುದು. ಈ ಬಗ್ಗೆ ಮಾಹಿತಿ ನೀಡಿದ ಹರಿನಾಥ್ ಗೌಡ ಮಗಳು ಅಲಕನಂದ ದೇವಿ, ಇಲ್ಲಿ ಸಣ್ಣ ಮಕ್ಕಳಿಂದ ನೂರು ವರ್ಷದವರೆಗೆ ಎಲ್ಲರಿಗೂ ಪ್ರಸಾದ ನೀಡಲಾಗುವುದು. ಗರ್ಭಿಣಿಯರು ಈ ಪ್ರಸಾದ ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೆ ಮೂರು ಗಂಟೆ ಮೊದಲು ಇದನ್ನು ಸೇವಿಸಬೇಕು ಎಂದರು.
ವಸ್ತು ಪ್ರದರ್ಶನದ ಮೈದಾನದಲ್ಲಿ ಪ್ರಸಾದ ವಿತರಣೆ ನಡೆಯಲಿದ್ದು, ಇದಕ್ಕಾಗಿ 34 ಕೌಂಟರ್ ಜೊತೆಗೆ 32 ಸಾಲುಗಳ ವ್ಯವಸ್ಥೆ ಜನರಿಗೆ ಮಾಡಲಾಗಿದ್ದು, ಅವರಿಗೆ ಅನುಕೂಲವಾಗುವಂತೆ ಸಾಕಷ್ಟು ಪ್ರಮಾಣದ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ. ವಿಕಲಚೇತನ, ಹಿರಿಯರು ಮತ್ತು ಮಹಿಳೆಯರಿಗೆ ವಿಶೇಷ ಸಾಲುಗಳನ್ನು ಮಾಡಲಾಗಿದೆ. ಈ ಮೈದಾನದಲ್ಲಿ ಎರಡು ದಿನ ಮೀನಿನ ಪ್ರಸಾದ ನೀಡಲಾಗುವುದು. ಬಳಿಕ ಬಥಿನಿ ಕುಟುಂಬದ ಮನೆಯದಲ್ಲಿ ಒಂದು ವಾರ ಕಾಲ ಪ್ರಸಾದ ವಿನಿಮಯ ಆಗಲಿದೆ.