ಲಂಡನ್: ಇದೇ ಮೊದಲ ಬಾರಿಗೆ ಲಂಡನ್ನಲ್ಲಿ ನಡೆಯುತ್ತಿರುವ ಸೀರೆ ನಡಿಗೆ (saree walkathon)ನಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಲಿದ್ದಾರೆ. ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗದ ದಿನದ ಹಿನ್ನೆಲೆ ಈ ವಿಶೇಷ ವಾಕಥಾನ್ ನಡೆಸಲಾಗಿದ್ದು, ಈ ಮೂಲಕ ಭಾರತೀಯ ಕೈಮಗ್ಗದ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಸೀರೆ ನಡಿಗೆ ಹೊಂದಿದೆ.
ಭಾರತದ ವಿವಿಧ ರಾಜ್ಯಗಳ ಮಹಿಳೆಯರು ಆಯಾ ರಾಜ್ಯಗಳಲ್ಲಿ ಮಾನ್ಯತೆ ಪಡೆದಿರುವ ವಿಶೇಷ ಕೈಮಗ್ಗದ ಸೀರೆಯುಟ್ಟು ಈ ವಾಕಥಾನ್ನಲ್ಲಿ ಭಾಗಿಯಾಗಲಿದ್ದಾರೆ. ವಿಶೇಷವಾದ ಮತ್ತು ಐತಿಹಾಸಿನ ಈ ಸೀರೆ ನಡಿಗೆ ಕಾರ್ಯಕ್ರಮ ಲಂಡನ್ನಲ್ಲಿ ಆಗಸ್ಟ್ 6ರಂದು ನಡೆಯಲಿದೆ ಎಂದು ಲಂಡನ್ ಮೂಲದ ನ್ಯೂಸ್ ವೆಬ್ಸೈಟ್ವೊಂದು ವರದಿ ಮಾಡಿದೆ.
ಈ ಸೀರೆ ನಡಿಗೆ ಟ್ರಾಫಲ್ಗರ್ ಸ್ಕ್ವೇರ್ ನಿಂದ ಆರಂಭವಾಗಲಿದ್ದು, ಇದು ಲಂಡನ್ನ ವೆಸ್ಟ್ಮಿನಿಸ್ಟರ್ನಲ್ಲಿರುವ ಐತಿಹಾಸಿಕ ಪಾರ್ಲಿಮೆಂಟ್ ಸ್ಕ್ವೇರ್ನಲ್ಲಿ ಕೊನೆಯಾಗಲಿದೆ. ಈ ನಡುವೆ ಇದು ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ನೆಲೆಸಿರುವ 10 ಡೌನಿಂಗ್ ಸ್ಟ್ರೀಟ್ ಮೂಲಕ ಸಾಗಲಿದೆ.
ಈ ಕಾರ್ಯಕ್ರಮವನ್ನು ಭಾರತೀಯ ಮಹಿಳೆಯರಿಂದ ಪ್ರಭಾವಿತರಾಗಿರುವ ಬ್ರಿಟಿಷ್ ವುಮೆನ್ ಇನ್ ಸ್ಯಾರಿ ಗ್ರೂಪ್ ಸಂಘಟಿಸಿದ್ದು, ಇದಕ್ಕೆ ಭಾರತೀಯ ಮಹಿಳೆಯರು ಬೆಂಬಲಿಸಿದ್ದಾರೆ.
ಸೀರೆಯ ಮೆರುಗು ಹೆಚ್ಚಿಸಿದ ಭಾರತೀಯ ನಾರಿ: ಇಂದಿನ ಆಧುನಿಕ ಭಾರತೀಯ ಮಹಿಳೆ ತನ್ನ ಗೂಡಿನಿಂದ ಹೊರಗಿನ ಪ್ರಪಂಚವನ್ನು ಪ್ರಯಾಣಿಸುವ ಉದ್ದೇಶದಲ್ಲಿ ನಂಬಿಕೆ ಹೊಂದಿದ್ದಾಳೆ. ಈ ವೇಳೆ ಆಕೆ ತಮ್ಮ ಸಾಂಪ್ರದಾಯಿಕ ಸೀರೆಯ ಉಡುಗೆ ಶೈಲಿಯ ಮೂಲಕ ಅದನ್ನು ಮತ್ತಷ್ಟು ಹೆಚ್ಚಿನದನ್ನಾಗಿ ಮಾಡುತ್ತಾಳೆ ಎಂದು ಬ್ರಿಟಿಷ್ ವುಮೆನ್ ಇನ್ ಸ್ಯಾರಿ ಗ್ರೂಪ್ ಕಾರ್ಯಕ್ರಮ ಸಂಘಟಕಿ ದೀಪ್ತಿ ಜೈನ್ ತಿಳಿಸಿದ್ದಾರೆ.