ಮೆಂತ್ಯೆ ಕಾಳಿನಲ್ಲಿ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಇದು ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವುದಿಲ್ಲ. ಬದಲಾಗಿ ಹಲವು ಸಾಮಾನ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಇದಕ್ಕಿಂತ ಹೆಚ್ಚಾಗಿ ಮೆಂತ್ಯೆಕಾಳಿನ ನೀರನ್ನು ಪ್ರತಿನಿತ್ಯದ ಆಹಾರದೊಂದಿಗೆ ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರ ಲಾಭ ನೀಡುತ್ತದೆ.
ಚರ್ಮಕ್ಕೆ ಉತ್ತಮ: ಮೆಂತ್ಯೆ ಕಾಳಿನ ನೀರು ಜೀರ್ಣಕ್ರಿಯೆಗೆ ಪ್ರಯೋಜನವನ್ನು ನೀಡುತ್ತದೆ. ಅಲ್ಲದೇ ಇದರಲ್ಲಿ ವಿಟಮಿನ್ ಕೆ ಮತ್ತು ವಿಟಮಿನ್ ಸಿ ಅಂಶ ಇದ್ದು, ಇದು ಚರ್ಮವನ್ನು ಮೃದುಗೊಳಿಸುತ್ತದೆ. ತ್ವಚೆಯ ಸಾಮಾನ್ಯ ಸಮಸ್ಯೆಗಳಾದ ಮೊಡವೆ ಮತ್ತು ಕಣ್ಣಿನ ಕಪ್ಪು ವರ್ತುಲ ನಿವಾರಣೆಯಲ್ಲಿ ಇದು ಪ್ರಯೋಜನ ನೀಡುತ್ತದೆ.
ಮಧುಮೇಹ ನಿರ್ವಹಣೆ:ಮೆಂತ್ಯೆಕಾಳಿನ ನೀರು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮ್ಯಾಜಿಕ್ ರಸವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಇನ್ಸುಲಿನ್ ನಿಯಂತ್ರವನ್ನು ಮಾಡುವ ಮೂಲಕ ಮಧುಮೇಹ ಹೆಚ್ಚಾಗದಂತೆ ಕಾಪಾಡುತ್ತದೆ.
ವಿಷಪೂರಿತ ಅಂಶ ಹೊರಕ್ಕೆ: ದೇಹದಲ್ಲಿನ ವಿಷಪೂರಿತ ಅಂಶವನ್ನು ತೆಗೆದು ಹಾಕಿ, ಹೊಟ್ಟೆ ಸಮಸ್ಯೆ ನಿವಾರಣೆ ಮಾಡುವಲ್ಲಿ ಮೆಂತ್ಯೆ ನೀರು ಪ್ರಯೋಜನವನ್ನು ನೀಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆ ಹೋಗಲಾಡಿಸುತ್ತದೆ.
ಜೀರ್ಣಶಕ್ತಿ ವೃದ್ಧಿ: ಮೆಂತ್ಯೆ ಕಾಳಿನ ನೀರಿನಲ್ಲಿ ಆ್ಯಂಟಿಬ್ಯಾಕ್ಟಿರಿಯಾ ಸಾಮರ್ಥ್ಯ ಇದೆ. ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಿ, ಗ್ಯಾಸ್ಟ್ರಿಕ್ ಮತ್ತು ಉಬ್ಬರದಂತಹ ಸಮಸ್ಯೆ ನಿವಾರಣೆ ಮಾಡುತ್ತದೆ. ಮೆಂತ್ಯೆ ಅತಿ ಹೆಚ್ಚು ತಂಪು ಆಹಾರವಾಗಿರುವ ಹಿನ್ನೆಲೆ ಇದನ್ನು ಚಳಿಗಾಲದ ಸಮಯದಲ್ಲಿ ಅತಿ ಹೆಚ್ಚಿನ ಸೇವನೆ ಮಾಡದಿರುವುದು ಒಳ್ಳೆಯದು.
ಕೊಲೆಸ್ಟ್ರಾಲ್ ಕಡಿಮೆ: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತೆಗೆದು ಹಾಕಲು ಮತ್ತು ಟ್ರಿಗ್ಲೆಸೆರೈಡ್ ಮಟ್ಟ ಹೆಚ್ಚಿಸಿ, ಆರೋಗ್ಯಯುತ ಎಚ್ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಮೆಂತ್ಯೆಕಾಳಿನಲ್ಲಿ ಸ್ಟೆರೊಯ್ಡಲ್ ಸಫೋನಿನ್ಸ್ ಅಂಶವಿದ್ದು, ಇದು ಕರುಳಿನಲ್ಲಿರುವ ಕೊಲೆಸ್ಟ್ರಾಲ್ ಹೀರಿಕೊಳ್ಳುತ್ತದೆ.
ಕೂದಲ ಆರೋಗ್ಯ: ಕೂದಲಿನ ಸಮಸ್ಯೆಗೂ ಇದು ಪರಿಹಾರ ನೀಡಬಲ್ಲದು. ಇದು ಕೂದಲು ಸೋಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಕೂದಲಿಗೆ ಬೇಕಾದ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. ಅಲ್ಲದೇ, ಅಕಾಲಿಕವಾಗಿ ಕೂದಲು ಬೆಳ್ಳಗಾಗುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೇ, ಇದರಲ್ಲಿನ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫಾಸ್ಫರಸ್, ಪೌಷ್ಠಿಕಾಂಶಗಳು ಮೂಳೆಗಳ ಆರೋಗ್ಯಕ್ಕೆ ಪ್ರಯೋಜನ ನೀಡುತ್ತವೆ. (ಎಎನ್ಐ)
ಇದನ್ನೂ ಓದಿ:ಪೋಷಕಾಂಶಗಳ ಆಗರ ಸಬ್ಬಕ್ಕಿ; ಇದರ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನ