ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಣ್ಣಿನ ಸಮಸ್ಯೆಗಳಿಗೆ ಒಳಗಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಣ್ಣಿನ ಉರಿ, ಕೆರೆತ, ಅಲರ್ಜಿಯಂತಹ ಪ್ರಕರಣಗಳು ವಾಯು ಮಾಲಿನ್ಯದಿಂದ ಕಂಡುಬರುತ್ತಿವೆ ಎಂದು ನೇತ್ರತಜ್ಞರು ತಿಳಿಸಿದ್ದಾರೆ.
ದೆಹಲಿಯಲ್ಲಿ ವಾಯು ಗುಣಮಟ್ಟ ಕಳಪೆ ವರ್ಗದಲ್ಲಿದ್ದು, ಎಕ್ಯೂಐ 324 ಇದೆ. ವಾಯು ಗುಣಮಟ್ಟದ ತೀವ್ರತೆ ಮತ್ತು ದೆಹಲಿ- ಎನ್ಸಿಆರ್ನಲ್ಲಿ ಅಧಿಕ ಮಟ್ಟದ ಮಾಲಿನ್ಯದಿಂದಾಗಿ ಕಣ್ಣಿನ ಸಮಸ್ಯೆ ಪ್ರಕರಣಗಳು ಶೇ 40ರಷ್ಟು ಹೆಚ್ಚಾಗಿದೆ. ಕಣ್ಣಿನಲ್ಲಿ ಕೆಂಪು, ಕೆರೆತ, ನೀರು ಸೋರುವಿಕೆಯಂತಹ ಸಮಸ್ಯೆಗಳನ್ನು ಕಾಣುತ್ತಿದ್ದೇವೆ ಎಂದು ದೆಹಲಿ ಐ ಸೆಂಟರ್ ನೇತ್ರ ತಜ್ಞ ಡಾ ಇಕೆಡಾ ಲಾಲ್ ತಿಳಿಸಿದ್ದಾರೆ.
ಮಾಲಿನ್ಯದಿಂದ ಹೆಚ್ಚಾದ ಸಮಸ್ಯೆ: ಈಗಾಗಲೇ ಒಣ ಕಣ್ಣಿನ ಸಮಸ್ಯೆ ಹೊಂದಿರವವರಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣ ಕಂಡಿದೆ. ನಾವು ಗಮನಿಸಿದಂತೆ ಕಣ್ಣಿನ ಸಮಸ್ಯೆಯಿಂದ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಶೇ 40ರಷ್ಟು ಉಲ್ಬಣಗೊಂಡಿದೆ. ಮಾಲಿನ್ಯ ಮತ್ತು ಗಾಳಿಯಲ್ಲಿರುವ ಧೂಳು ಕಣ್ಣಿನ ಅಲರ್ಜಿ ಮತ್ತು ಇತರೆ ಕಣ್ಣಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ದೆಹಲಿಯಲ್ಲಿ ಎಕ್ಯೂಐ ಮಟ್ಟ ಹೆಚ್ಚಿದ್ದು, ಇದು ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.