ಯುರೋಪ್ ಮತ್ತು ಅಮೆರಿಕದ ಆರೋಗ್ಯ ಅಧಿಕಾರಿಗಳು ಮಂಕಿಪಾಕ್ಸ್ ಸೋಂಕನ್ನ ಪತ್ತೆ ಮಾಡಿದ್ದಾರೆ. ಇದು ಆಫ್ರಿಕಾದ ದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ರೋಗವಾಗಿದೆ. ಇದು ಹೆಚ್ಚಾಗಿ ಯುವಕರಲ್ಲಿ ಕಂಡುಬರುತ್ತದೆ. ಆಫ್ರಿಕಾ ಪ್ರವಾಸ ಮಾಡಿದ ವಿವಿಧ ರಾಷ್ಟ್ರಗಳ ಜನರಲ್ಲೂ ಈ ರೋಗ ಪತ್ತೆಯಾಗಿದೆ. ಆದಾಗ್ಯೂ ಈ ಸೋಂಕಿನ ಅಪಾಯದ ತೀವ್ರತೆಯು ಸಾಮಾನ್ಯ ಜನರಿಗೆ ಕಡಿಮೆ ಎಂದು ಹೇಳಲಾಗ್ತಿದೆ.
ಮಂಕಿಪಾಕ್ಸ್ ಎಂದರೇನು?..ಮಂಕಿಪಾಕ್ಸ್ ಎಂಬುದು ಕೋತಿಗಳಿಂದ ಹರಡುವ ವೈರಸ್ ಆಗಿದೆ. ಈ ರೋಗದ ಹೆಚ್ಚಿನ ಮಾನವ ಪ್ರಕರಣಗಳು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ದಾಖಲಾಗಿವೆ. 1958 ರಲ್ಲಿ ವಿಜ್ಞಾನಿಗಳು ಈ ರೋಗವನ್ನು ಮೊದಲ ಬಾರಿಗೆ ಗುರುತಿಸಿದರು. ಸಂಶೋಧನೆಯ ವೇಳೆ ಕೋತಿಗಳಲ್ಲಿ ಪಾಕ್ಸ್ ತರಹದ ಕಾಯಿಲೆ ಪತ್ತೆಯಾಗಿತ್ತು. ಇದನ್ನು ಮಂಕಿಪಾಕ್ಸ್ ಎಂದು ಕರೆಯಲಾಗಿದೆ. ಇದು ಮಾನವನಿಗೆ ಮೊದಲ ಬಾರಿಗೆ 1970 ರಲ್ಲಿ ಕಾಂಗೋದ 9 ವರ್ಷದ ಹುಡುಗನಲ್ಲಿ ಕಂಡು ಬಂದಿತ್ತು.
ರೋಗಲಕ್ಷಣಗಳು ಮತ್ತು ಅದರ ಚಿಕಿತ್ಸೆ ಹೇಗೆ?..ಮಂಕಿಪಾಕ್ಸ್ ಸಿಡುಬು ರೋಗದ ಮಾದರಿಯಾಗಿದೆ. ಇದು ಸೌಮ್ಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ರೋಗಿಗಳು ಜ್ವರ, ದೇಹದಲ್ಲಿ ನೋವು, ಶೀತ ಮತ್ತು ಆಯಾಸವನ್ನು ಅನುಭವಿಸುತ್ತಾರೆ. ಹೆಚ್ಚು ಗಂಭೀರವಾದ ಕಾಯಿಲೆ ಇರುವ ಜನರು ಮುಖ ಮತ್ತು ಕೈಗಳ ಮೇಲೆ ದದ್ದು ಮತ್ತು ಗಾಯಗಳನ್ನು ಹೊಂದಿರುತ್ತಾರೆ.
ಈ ರೋಗ ಸೋಕಿದ ಮೇಲೆ ದೇಹದ ಇತರ ಭಾಗಗಳಿಗೆ ವ್ಯಾಪಿಸಬಹುದು. ಸುಮಾರು 5 ದಿನಗಳಿಂದ 3 ವಾರಗಳವರೆಗೆ ಈ ರೋಗದ ಕಾಲಾವಧಿಯು ಇರುತ್ತದೆ. ಹೆಚ್ಚಿನ ಜನರು ಆಸ್ಪತ್ರೆಗೆ ದಾಖಲಾಗದೆ ಎರಡರಿಂದ ನಾಲ್ಕು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಮಂಕಿಪಾಕ್ಸ್ 10 ಜನರಲ್ಲಿ ಒಬ್ಬರಿಗೆ ಮಾರಕವಾಗಬಹುದು ಮತ್ತು ಮಕ್ಕಳಲ್ಲಿ ಹೆಚ್ಚು ತೀವ್ರವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಮಂಕಿಪಾಕ್ಸ್ ವೈರಸ್‌ಗೆ ತುತ್ತಾದ ಜನರಿಗೆ ಸಾಮಾನ್ಯವಾಗಿ ಸಿಡುಬು ರೋಗಕ್ಕೆ ಹಾಕುವ ಲಸಿಕೆಯನ್ನೇ ನೀಡಲಾಗುತ್ತದೆ. ಇದು ಮಂಕಿಪಾಕ್ಸ್ ವಿರುದ್ಧವೂ ಪರಿಣಾಮಕಾರಿ ಎಂದು ಹೇಳಲಾಗಿದೆ. ಆ್ಯಂಟಿವೈರಲ್ ಔಷಧಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್ ಎಲ್ಲಾ ಶಂಕಿತ ಪ್ರಕರಣಗಳನ್ನು ಪ್ರತ್ಯೇಕಿಸಿ ಮತ್ತು ಹೆಚ್ಚಿನ ಅಪಾಯದ ರೋಗಿಗಳಿಗೆ ಸಿಡುಬು ಲಸಿಕೆಯನ್ನು ನೀಡುವಂತೆ ಶಿಫಾರಸು ಮಾಡಿದೆ.
ಮಂಕಿಪಾಕ್ಸ್ ಪ್ರಕರಣಗಳೆಷ್ಟಿವೆ?ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಆಫ್ರಿಕನ್ ದೇಶಗಳಲ್ಲಿ ಸಾವಿರಾರು ಮಂಕಿಪಾಕ್ಸ್ ಸೋಂಕುಗಳನ್ನು ಗುರುತು ಮಾಡಿದೆ. ಹೆಚ್ಚಿನವು ಕಾಂಗೋ ರಾಷ್ಟ್ರದಲ್ಲೇ ಗೋಚರವಾಗಿವೆ. ಇಲ್ಲಿ ವರ್ಷಕ್ಕೆ ಸುಮಾರು 6 ಸಾವಿರ ಪ್ರಕರಣಗಳು ದಾಖಲಾಗುತ್ತವೆ. ನೈಜೀರಿಯಾದಲ್ಲಿ ವರ್ಷಕ್ಕೆ ಸುಮಾರು 3 ಸಾವಿರ ಕೇಸ್ಗಳು ಕಂಡುಬರುತ್ತವೆ.