ಹೈದರಾಬಾದ್: ಆರೋಗ್ಯಕರ ಜೀವನ ಶೈಲಿಗೆ ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ಅದರಲ್ಲೂ ಈಗಿನ ದಿನಗಳಲ್ಲಿ ಜನರು ವ್ಯಾಯಾಮ ಗಂಭೀರವಾಗಿ ಪರಿಗಣಿಸಿದ್ದು, ನಿತ್ಯದ ಜೀವನದ ಭಾಗವಾಗಿಸಿದ್ದಾರೆ. ಇದರಲ್ಲಿ ಮತ್ತೆ ಕೆಲವು ಮಂದಿ ತೂಕ ಕಳೆದುಕೊಂಡು, ನೀಳವಾಗಿ ಕಾಣಬೇಕು ಎಂಬ ಉದ್ದೇಶದಿಂದಲೂ ವ್ಯಾಯಾಮದ ಮೊರೆ ಹೋಗುವವರಿದ್ದಾರೆ. ಇವರಲ್ಲಿ ಇರುವ ದೊಡ್ಡ ತಪ್ಪು ಕಲ್ಪನೆ ಎಂದರೆ, ಅಧಿಕ ವ್ಯಾಯಾಮ ಮಾಡಿದರೆ, ಬೇಗ ತೂಕ ಕಳೆದುಕೊಳ್ಳಬಹುದು ಎಂಬುದು. ಆದರೆ, ಈ ರೀತಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲದೇ, ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
ಒಂದೇ ದಿನ ಅತಿ ಹೆಚ್ಚು ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಒತ್ತಡದ ಹಾರ್ಮೋನ್ ಉತ್ಪಾದನೆ ಹೆಚ್ಚಾಗುತ್ತದೆ. ಇದು ನಿದ್ರಾ ಹೀನತೆಗೆ ಕಾರಣವಾಗುತ್ತದೆ. ಮಾನಸಿಕ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಅಷ್ಟೇ ಅಲ್ಲ, ದೀರ್ಘ ಕಾಲ ಈ ರೀತಿ ವ್ಯಾಯಾಮ ಮಾಡುವುದು ನಿಮ್ಮನ್ನು ಖಿನ್ನತೆಗೂ ದೂಡುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎನ್ನುವುದು ತಜ್ಞರ ಅಭಿಮತವಾಗಿದೆ.
ಕೆಲವು ಮಂದಿ ಜಿಮ್ಗೆ ಹೋಗಿ ತೂಕ ಕಳೆದುಕೊಳ್ಳುತ್ತಾರೆ. ಜಿಮ್ಗೆ ಹೋದ ವಾರದಲ್ಲೇ ತೂಕ ಕಳೆದುಕೊಳ್ಳಬೇಕು ಎಂದು ಅವರು ಕೂಡ ಭಾರಿ ವ್ಯಾಯಾಮದಲ್ಲಿ ತೊಡಗುತ್ತಾರೆ. ಮಹಿಳೆಯರು ಈ ರೀತಿ ಮಾಡುವುದರಿಂದ ಅವರ ಮಾಸಿಕ ಋತು ಚಕ್ರದ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಈಸ್ಟ್ರೋಜನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಸ್ಥಿರಂದ್ರತೆಗೂ ಕಾರಣವಾಗಬಹುದು.