ಮೆಲ್ಬೋರ್ನ್: ಖಿನ್ನತೆ ನಿಯಂತ್ರಣದಲ್ಲಿ ದೈಹಿಕ ಚಟುವಟಿಕೆಗಳು ಪ್ರಮುಖ ಪಾತ್ರವಹಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಸಂಶೋಧಕರ ತಂಡ ಸಂಶೋಧನೆ ನಡೆಸಿದೆ. ಇದರ ಅನುಸಾರ ಔಷಧಗಳಿಗಿಂತ ವ್ಯಾಯಾಮಗಳು ಒಂದೂವರೆ ಪಟ್ಟು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಕುರಿತು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ ಮೆಡಿಸಿನ್ನಲ್ಲೂ ಪ್ರಕಟವಾಗಿದೆ.
ಈ ಸಂಬಂಧ 97 ಅಧ್ಯಯನ, 1039 ಪ್ರಯೋಗ ನಡೆಸಿದ್ದು, 1, 28, 119 ಭಾಗಿದಾರರ ಮೇಲೆ ಅಧ್ಯಯನ ಕೈಗೊಳ್ಳಲಾಗಿದೆ. ಈ ವೇಳೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿದವರಲ್ಲಿ ದುಃಖ, ಆತಂಕ ಮತ್ತು ಖಿನ್ನತೆಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ನಡೆಸಲಾಗಿದೆ. ಈ ಸಂಬಂಧ 12 ವಾರಗಳ ಕಾಲ ಭಾಗಿದಾರರ ಅಧ್ಯಯನ ನಡೆಸಲಾಗಿದೆ. ಇವರ ಮಾನಸಿಕ ಆರೋಗ್ಯ ಸುಧಾರಣೆ ಮಾಡುವಲ್ಲಿ ದೈಹಿಕ ಚಟುವಟಿಕೆಗಳು ಅತ್ಯಂತ ಪ್ರಮುಖ ಪಾತ್ರವಹಿಸಿರುವುದು ತಿಳಿದು ಬಂದಿದೆ.
ಅದರಲ್ಲೂ ಖಿನ್ನತೆ, ಗರ್ಭಿಣಿ ಮತ್ತು ಹೆರಿಗೆ ಬಳಿಕ ಮಹಿಳೆಯರಲ್ಲಿ ಕಾಡುವ ಮಾನಸಿಕ ಸಮಸ್ಯೆ, ಇನ್ನಿತರ ರೋಗಗಳಿಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿರುವವರಲ್ಲಿ ವ್ಯಾಯಾಮ ಅಥವಾ ಇನ್ನಿತರ ದೈಹಿಕ ಚಟುವಟಿಕೆ ಹೆಚ್ಚಿನ ಪ್ರಯೋಜನ ನೀಡಿದೆ.
ಕ್ಷೀಣಿಸುತ್ತಿದೆ ಮಾನಸಿಕ ಆರೋಗ್ಯ: ವಿಶ್ವ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಪ್ರತಿ ಎಂಟರಲ್ಲಿ ಒಬ್ಬರು ಅಮದರೆ 970 ಮಿಲಿಯನ್ ಮಂದಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಕಳಪೆ ಮಾನಸಿಕ ಆರೋಗ್ಯಕ್ಕಾಗಿ ಪ್ರತಿ ವರ್ಷ 2.5 ಅಮೆರಿಕನ್ ಡಾಲರ್ ಅನ್ನು ಜಗತ್ತಿನ ಆರ್ಥಿಕತೆ ಖರ್ಚು ಮಾಡುತ್ತಿದೆ. 2030ರ ವೇಳೆಗೆ ಇದರ ವೆಚ್ಚ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.