ನವದೆಹಲಿ: ದೇಶದಲ್ಲಿ ಚಿಕ್ಕ ಮಕ್ಕಳು ಮತ್ತು ಹದಿಹರೆಯದ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಏರಿಕೆಯಾಗುತ್ತಿದ್ದು, ಮಕ್ಕಳಿಗೆ ಈ ಬಗ್ಗೆ ಎಚ್ಚರಿಕೆ, ಜಾಗ್ರತೆಯಿಂದ ವರ್ತಿಸುವಂತೆ ಮತ್ತು ಕೆಟ್ಟ ಸ್ಪರ್ಶಗಳ ಕುರಿತು ತಿಳಿಸುವ ಅಗತ್ಯ ಇದೆ. ಮಕ್ಕಳಿಗೆ ಹೇಗೆ ನಾವು ರಸ್ತೆ ದಾಟುವುದು, ಬಿಸಿ ಪಾತ್ರೆಗಳನ್ನು ಮುಟ್ಟುವುದು ಎಂಬುದನ್ನು ಕಲಿಸುವಂತೆ ಈ ಬಗ್ಗೆ ಕೂಡ ಜ್ಞಾನ ನೀಡುವುದು ಅಗತ್ಯವಾಗಿದೆ. ದುರದೃಷ್ಟವಶಾತ್, ಅನೇಕ ಕುಟುಂಬಗಳು ಈ ವಿಚಾರವನ್ನು ಮುಕ್ತವಾಗಿ ಮಕ್ಕಳೊಂದಿಗೆ ಮಾತನಾಡುವುದಿಲ್ಲ. ನಮ್ಮ ಸಮಾಜ ಲೈಂಗಿಕತೆ, ಕಿರುಕುಳ, ಸುರಕ್ಷತೆ ಕುರಿತು ಚರ್ಚೆ ಮಾಡುವುದನ್ನು ಒಂದು ರೀತಿಯ ನಿಷೇಧದಂತೆ ಪರಿಗಣಿಸುತ್ತದೆ.
ಮಕ್ಕಳನ್ನು ಲೈಂಗಿಕ ದೌರ್ಜನ್ಯದಂತಹ ಘಟನೆಗಳಿಂದ ರಕ್ಷಿಸುವುದು ಪೋಷಕರ ಉಪಕ್ರಮಗಳಿಂದ ಸಾಧ್ಯವಿದೆ. ಈ ಬಗ್ಗೆ ಮಾತುಕತೆಯು ಮಕ್ಕಳ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದಾಗಿ ಮಹತ್ವದ್ದಾಗಿದೆ. ಇದು ಮಕ್ಕಳಿಗೆ ಅಹಿತಕರ ಸಂದರ್ಭದಲ್ಲೂ ಕೂಡ ಅವರ ಬೆನ್ನ ಹಿಂದೆ ಪೋಷಕರು ಇದ್ದಾರೆ ಎಂಬ ಭರವಸೆಯನ್ನು ನೀಡುತ್ತದೆ. ಸರ್ಕಾರ ಕೂಡ ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳಗಳಿಂದ ರಕ್ಷಿಸಿ, ಅವರ ಯೋಗಕ್ಷೇಮ ಕಾಪಾಡುವ ದೃಷ್ಟಿಯಿಂದ ಪೋಕ್ಸೋ ಕಾಯ್ದೆ 2012 ಅನ್ನು ಜಾರಿಗೆ ತಂದಿದೆ.
ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದು ಮತ್ತು ಅವರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ ಎಂಬುದಕ್ಕೆ ಇಲ್ಲಿ ಬಲವಾದ ಕಾರಣಗಳು ಇಲ್ಲಿವೆ..
ಜೀವನದ ಮೇಲೆ ಆಗುವ ಮಾನಸಿಕ ಮತ್ತು ದೈಹಿಕ ಆಘಾತ ತಪ್ಪಿಸುವುದು: ಮಕ್ಕಳ ಮೇಲಿನ ಲೈಂಗಿಕ ಕಿರುಕುಳದಿಂದ ಅವರು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಗಂಭೀರವಾಗಿ ಹಾನಿ ಉಂಟಾಗುತ್ತದೆ. ಇದರಿಂದ ಅವರಲ್ಲಿ ಆಘಾತವಾಗುತ್ತದೆ. ಆತಂಕ, ಖಿನ್ನತೆ, ಆಘಾತದ ನಂತರ ಒತ್ತಡ ಸಮಸ್ಯೆ (ಪಿಟಿಎಸ್ಡಿ) ಮತ್ತು ಆತ್ಮಹತ್ಯೆಯಂತಹ ಯೋಚನೆಗಳು ಬರುತ್ತವೆ. ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ತಪ್ಪಿಸುವ ಮೂಲಕ ಅವರ ಮೇಲೆ ಉಂಟಾಗುವ ಆಘಾತವನ್ನು ತಪ್ಪಿಸಬಹುದು.
ಬಾಲ್ಯ ಕಾಪಾಡುವುದು: ಪ್ರತಿಯೊಂದು ಮಗುವಿಗೆ ಸುರಕ್ಷಿತ ಬಾಲ್ಯವನ್ನು ಹೊಂದುವ ಹಕ್ಕು ಇರುತ್ತದೆ. ಲೈಂಗಿಕ ಕಿರುಕುಳ ಅದರ ಮುಗ್ಧತೆಯನ್ನು ಮತ್ತು ಬೇರೆಯವರನ್ನು ನಂಬುವ ಸಾಮರ್ಥ್ಯವನ್ನು ಕಳೆದು ಹಾಕುತ್ತದೆ. ಮಗುವಿನ ಜೀವನದ ಈ ದುರ್ಬಲ ಹಂತದಲ್ಲಿ ಧನಾತ್ಮಕ ಮತ್ತು ಆರೋಗ್ಯಕರ ಅಭಿವೃದ್ಧಿಗೆ ಶ್ರಮಿಸಬೇಕಿದೆ.
ಸಬಲೀಕರಣ ಮತ್ತು ಸ್ವಾಭಿಮಾನ:ಲೈಂಗಿಕ ದೌರ್ಜನ್ಯ ಕುರಿತು ಅರಿವು ಮೂಡಿಸಿದಾಗ ಮಕ್ಕಳು ತಮ್ಮ ಹಕ್ಕು ಮತ್ತು ವೈಯಕ್ತಿಕ ಗಡಿಗಳ ಬಗ್ಗೆ ಜ್ಞಾನ ಹೊಂದಿ ಸ್ವಾಭಿಮಾನಿಗಳಾಗಲು ಸಾಧ್ಯ. ಜೊತೆಗೆ ಸೂಕ್ಷ್ಮತೆ ಅರಿಯುವ ಜೊತೆಗೆ ಅಹಿತರಕರ ಭಾವನೆಗಳನ್ನು ಹಿಮ್ಮೆಟ್ಟಿಸಲು ಕಲಿಯುತ್ತಾರೆ.