ಈಗಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಅತಿಯಾದ ಒತ್ತಡ ಮತ್ತು ರಕ್ತದೊತ್ತಡ ಸಮಸ್ಯೆ ಸರ್ವೇಸಾಮಾನ್ಯ ಎಂಬಂತಾಗಿದೆ. ಹೀಗಾಗಿ ಜನರು ಅತಿಯಾಗಿ ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾಗುತ್ತಿರುವುದು ವರದಿಯಾಗುತ್ತಿವೆ.
ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವು ನಮ್ಮ ಹೃದಯ ರಕ್ತನಾಳಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷಿಸಿದಲ್ಲಿ ಅದು ರಕ್ತಪರಿಚಲನಾ ವ್ಯವಸ್ಥೆಯನ್ನು ಹಾನಿ ಮಾಡಿ ಹೃದಯಾಘಾತ, ಪಾರ್ಶ್ವವಾಯು, ಇತರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಅಧಿಕ ಒತ್ತಡ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ನಾವು ಧಾನ್ಯಗಳು, ಸಂಸ್ಕರಿಸಿದ ಧಾನ್ಯಗಳು, ಸಂಸ್ಕರಿಸಿದ ಕೆಂಪು ಮಾಂಸ, ಕೋಳಿ ಮಾಂಸ, ಮೊಟ್ಟೆ, ಮೀನು ಮತ್ತು ದ್ವಿದಳ ಧಾನ್ಯಗಳನ್ನು ಒಳಗೊಂಡಿರುವ ನಾಲ್ಕು ಪದಾರ್ಥಗಳನ್ನು ತಿನ್ನಲೇಬೇಕು. ಇದರಿಂದ 66 ಪ್ರತಿಶತದಷ್ಟು ಹೃದಯಸಂಬಂಧಿ ಅಪಾಯವನ್ನು ಕಡಿಮೆ ಮಾಡಬಹುದು. ಇವುಗಳಲ್ಲಿ ಕನಿಷ್ಠ 2 ಪದಾರ್ಥಗಳನ್ನು ಸೇವಿಸಲೇಬೇಕು ಎಂದು ವರದಿಯೊಂದು ತಿಳಿಸಿದೆ.
ಅಧಿಕ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವನ್ನು ಸುಲಭವಾಗಿ ನಿಯಂತ್ರಿಸಲು ನಮಗಿರುವ ಏಕೈಕ ಮಾರ್ಗವೆಂದರೆ, ಅದು ಪೌಷ್ಟಿಕಾಂಶ ಆಹಾರ ಸೇವನೆ. ಕೊಬ್ಬಿನಾಂಶ, ಕಾರ್ಬೋಹೈಡ್ರೇಟ್ಗಳ ಜೊತೆಗೆ ಪ್ರೋಟೀನ್ ಸತ್ವವುಳ್ಳ ಆಹಾರವನ್ನು ಸೇವನೆ ಮಾಡುವುದು ಉತ್ತಮ ಎಂದು ಚೀನಾದ ಅಧ್ಯಯನಕಾರ ಕ್ಸಿಯಾನ್ ಹುಯಿ ಕಿನ್ ಸಲಹೆ ನೀಡಿದ್ದಾರೆ.
ಕಳಪೆ ಆಹಾರ ಸೇವನೆಯಿಂದ ಹೃದಯ ರಕ್ತನಾಳದ ಕಾಯಿಲೆಗಳು ಉಂಟಾಗಿ, ಅದರಿಂದ ಸಾವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ, ಇವುಗಳ ಮಧ್ಯೆ ಹೆಚ್ಚಿನ ಸಂಬಂಧವಿದೆ. ಇದಲ್ಲದೇ, ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ನ 2021 ರ ಆಹಾರ ಮಾರ್ಗಸೂಚಿಯ ಪ್ರಕಾರ ದೇಹಕ್ಕೆ ಪ್ರೋಟೀನ್ ಅಂಶದ ಆಹಾರ ಸೇವನೆ ಮಾಡುವುದು ಮುಖ್ಯ. ಹೆಚ್ಚಾಗಿ ಸಸ್ಯಗಳು, ಮೀನು, ಕಡಿಮೆ ಕೊಬ್ಬಿನ ಅಥವಾ ಕೊಬ್ಬುರಹಿತ ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡಬೇಕು. ಪ್ರತಿದಿನದ ಊಟದಲ್ಲಿ 155 ಗ್ರಾಂನಷ್ಟು ಪ್ರೋಟೀನ್ ಅಂಶ ತಿನ್ನಲು ಶಿಫಾರಸು ಮಾಡಲಾಗಿದೆ.
ಈ ವರದಿಯ ಅಧ್ಯಯನಕಾರರು ಆರೋಗ್ಯ ಮತ್ತು ಪೌಷ್ಟಿಕಾಂಶ ಸಮೀಕ್ಷೆಗಾಗಿ 1997 ರಿಂದ 2015 ರವರೆಗೆ 7 ಬಾರಿ ಚೀನಾದಲ್ಲಿ ವಾಸಿಸುವ 12,200 ವಯಸ್ಕರ ಆರೋಗ್ಯ ಮಾಹಿತಿಯನ್ನು ಆಧರಿಸಿ ವಿಶ್ಲೇಷಿಸಿದ್ದಾರೆ.
17 ವರ್ಷಗಳ ಅಧ್ಯಯನದಲ್ಲಿ ಕಂಡುಕೊಂಡದ್ದು ಏನು?
- ಅಧ್ಯಯನಕ್ಕೊಳಗಾದ 12,200 ಜನರಲ್ಲಿ 35% ಕ್ಕಿಂತ ಹೆಚ್ಚು ಜನರು ಆರಂಭಿಕ ಹಂತದಲ್ಲಿ ಹೆಚ್ಚಿನ ರಕ್ತದೊತ್ತಡವನ್ನು ಹೊಂದಿದ್ದರು.
- ಸೂಚಿಸಲಾದ ಪ್ರೋಟೀನ್ಯುಕ್ತ ಆಹಾರವನ್ನು 2 ಬಾರಿ ಸೇವನೆ ಮಾಡಿದವರಿಗಿಂತ 4 ಬಾರಿ ಸೇವಿಸಿದವರಲ್ಲಿ ರಕ್ತದೊತ್ತಡ ಸಮಸ್ಯೆಯು ಶೇ.66 ರಷ್ಟು ಕಡಿಮೆ ಕಾಣಿಸಿಕೊಂಡಿದೆ.
- 8 ಪ್ರಕಾರದ ಪ್ರೋಟೀನ್ ಅಂಶವುಳ್ಳ ಆಹಾರವನ್ನು ತೆಗೆದುಕೊಂಡವರಲ್ಲಿ ಒತ್ತಡದ ಸಮಸ್ಯೆಯ ಪ್ರಮಾಣವೂ ತೀರಾ ಕಡಿಮೆಯಾಗಿದ್ದು ಅಧ್ಯಯನದಲ್ಲಿ ಕಂಡುಬಂದಿದೆ.
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವನ್ನು ಸೇವಿಸುವುದು ಅಲ್ಲದೇ, ಪ್ರೋಟೀನ್ ಅಂಶಗಳುಳ್ಳ ಆಹಾರ ಪದಾರ್ಥಗಳನ್ನು ಹೇರಳವಾಗಿ ತಿನ್ನುವ ಮೂಲಕ ರಕ್ತದೊತ್ತಡ ಸಮಸ್ಯೆಯನ್ನು ದೂರ ಮಾಡಬಹುದು ಎಂಬುದು ಅಧ್ಯಯನಕಾರರ ಅಭಿಪ್ರಾಯ.
ಓದಿ:ಹೃದಯಾಘಾತ, ಹೃದಯ ಸ್ತಂಭನದಿಂದ ಬದುಕುಳಿದವರು ಅಕಾಲಿಕ ಮರಣ ಹೊಂದುವ ಸಾಧ್ಯತೆ ಹೆಚ್ಚು: ಅಧ್ಯಯನ