ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಇ - ಫಾರ್ಮಸಿಗಳ ಔಷಧಗಳ ದುರುಪಯೋಗದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ ಎಂದು ರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಇ-ಫಾರ್ಮಸಿಗಳು ಪ್ರಸ್ತುತ ಅನುಸರಿಸುತ್ತಿರುವ ವ್ಯವಹಾರ ಮಾದರಿ ಆತಂಕಕಾರಿಯಾಗಿದೆ. ಆನ್‌ಲೈನ್‌ನಲ್ಲಿ ಔಷಧ ಆರ್ಡರ್ ಮಾಡುವ ರೋಗಿಗಳಿಗೆ ಈ ವ್ಯಾಪಾರ ನೀತಿ ಸಮಸ್ಯಾತ್ಮಕವಾಗಬಹುದು. ಹಾಗೂ ಔಷಧ ಖರೀದಿಸುವವರ ಡೇಟಾ ಗೌಪ್ಯತೆಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದು, ಔಷಧಗಳ ದುರುಪಯೋಗದ ಸಾಧ್ಯತೆಯೂ ಇದೆ ಎಂಬುದು ಆರೋಗ್ಯ ಇಲಾಖೆಯ ಕಳವಳವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂತರ್ಜಾಲದಲ್ಲಿ ಔಷಧಗಳನ್ನು ಮಾರಾಟ ಮಾಡುತ್ತಿರುವ ಅಕ್ರಮ ಇ-ಫಾರ್ಮಸಿಗಳಿಗೆ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಈಗಾಗಲೇ ಶೋಕಾಸ್ ನೋಟಿಸ್ ನೀಡಿದೆ. ಫೆಬ್ರವರಿ 8 ರಂದು ಡಿಸಿಜಿಐ ಆನ್‌ಲೈನ್ ಫಾರ್ಮಸಿಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಿದ್ದು, ಎರಡು ದಿನಗಳಲ್ಲಿ ಪ್ರತಿಕ್ರಿಯಿಸಲು ಅಥವಾ ದೇಶದಲ್ಲಿ ಔಷಧಗಳ ಮಾರಾಟ ಮತ್ತು ವಿತರಣೆಯ ಕುರಿತು ಯಾವುದೇ ಸೂಚನೆಯಿಲ್ಲದೇ ಕಠಿಣ ಕ್ರಮಕ್ಕೆ ಸಿದ್ಧರಾಗಿ ಎಂದು ನೋಟಿಸ್ನಲ್ಲಿ ಸ್ಪಷ್ಟಪಡಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕೃತ ಮೂಲಗಳ ಪ್ರಕಾರ, ಇ-ಫಾರ್ಮಸಿಗಳು 1940 ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ವಿವಿಧ ಅಂಶಗಳನ್ನು ಉಲ್ಲಂಘನೆ ಮಾಡುತ್ತಿವೆ ಎಂದು ಹೇಳಿವೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ CDSCO 20 ಕ್ಕೂ ಹೆಚ್ಚು ಆನ್‌ಲೈನ್ ಫಾರ್ಮಸಿಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಶೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಿದೆ. ಟಾಟಾ1mg, ಪ್ರಾಕ್ಟೋ, ಅಪೊಲೊ ಅಮೆಜಾನ್, ಫ್ಲಿಪ್‌ಕಾರ್ಟ್, ಇತ್ಯಾದಿ ದೊಡ್ಡ ದೊಡ್ಡ ಉಧ್ಯಮಗಳು ಇದರಲ್ಲಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.