ಈ ಹಿಂದೆ 13-14 ವರ್ಷಕ್ಕೆ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಋತುಮತಿಯಾಗುತ್ತಿರುವ ವಯಸ್ಸು ಅಚ್ಚರಿಯ ಜೊತೆಗೆ ಆತಂಕ ಮೂಡಿಸುತ್ತಿದೆ. ಈಗ ಹೆಣ್ಣು ಮಕ್ಕಳು 7, 8 ವರ್ಷಕ್ಕೆಲ್ಲ ಪ್ರೌಢಾವಸ್ಥೆ ತಲುಪುತ್ತಿದ್ದಾರೆ. ಕೋವಿಡ್ ಸಮಯದಿಂದ ಈ ರೀತಿಯ ಅವಧಿಪೂರ್ವ ಪ್ರೌಢಾವಸ್ಥೆಯ ಪ್ರಕರಣಗಳು ಹೆಚ್ಚುತ್ತಿವೆ. ಕೋವಿಡ್ ಸಮಯದಲ್ಲಿ ಹೆಚ್ಚಿದ ಸ್ಕ್ರೀನ್ ಸಮಯ ಮತ್ತು ಕಡಿಮೆ ದೈಹಿಕ ಚಟುವಟಿಕೆಗಳು ಇದಕ್ಕೆ ಕಾರಣವೆಂದು ಅಧ್ಯಯನ ತಿಳಿಸಿದೆ.
ಜರ್ನಲ್ ಆಫ್ ಎಂಡೋಕ್ರೈನಿ ಸೊಸೈಟಿಯಲ್ಲಿ ಈ ಅಧ್ಯಯನದ ಕುರಿತು ವರದಿ ಪ್ರಕಟಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಪಿಡಿಯಾಟ್ರಿಕ್ ಎಂಡೋಕ್ರಿನೊಲೊಜಿಸ್ಟ್‌ನಲ್ಲಿ ಅವಧಿಪೂರ್ವವಾಗಿ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ತಲುಪುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಕೋವಿಡ್ ಕಾರಣ ಪ್ರಮುಖವಾಗಿದೆ. ಪ್ರೌಢಾವಸ್ಥೆಯಲ್ಲಿ ಹೆಣ್ಣು ಮಗುವಿನ ದೇಹವೂ ಯೌವ್ವನಾವಸ್ಥೆಗೆ ಬದಲಾವಣೆ ಹೊಂದುವ ಸೂಚನೆ ನೀಡುತ್ತದೆ. ಈ ವೇಳೆ ಮಗುವಿನಲ್ಲಿ ದೈಹಿಕ ಬದಲಾವಣೆ ಅಭಿವೃದ್ಧಿ ಹೊಂದುತ್ತದೆ.
ಕೋವಿಡ್ ಪರಿಣಾಮವೇನು?: "ಕೋವಿಡ್ 19ನೊಂದಿಗೆ ಸ್ಥೂಲಕಾಯದಂತಹ ಎಂಡೋಕ್ರೈನ್ ಸಮಸ್ಯೆಗಳು ಕೂಡ ಹೆಣ್ಣು ಮಕ್ಕಳು ಬಹುಬೇಗ ಪ್ರೌಢಾವಸ್ಥೆಗೆ ತಲುಪಲು ಕಾರಣವಾಗಿದೆ. ಕೋವಿಡ್ ಸಮಯದಲ್ಲಿ ಈ ರೀತಿ ಬೇಗ ಪ್ರೌಢಾವಸ್ಥೆಗೆ ತಲುಪುತ್ತಿರುವುದು ನಮ್ಮ ಅಧ್ಯಯನ ದೃಢೀಕರಿಸಿದೆ. ಕಳಪೆ ತಿನ್ನುವ ಅಭ್ಯಾಸ, ವ್ಯಾಯಾಮ ಚಟುವಟಿಕೆ, ಅಧಿಕ ಮೊಬೈಲ್ ವೀಕ್ಷಣೆ ಮತ್ತು ನಿದ್ರೆ ಸಮಸ್ಯೆಗಳು ಕೂಡ ಇದಕ್ಕೆ ಕೊಡುಗೆ ನೀಡಿವೆ" ಎಂದು ಇಟಲಿಯ ಗೆನೊವಾ ಯುನಿವರ್ಸಿಟಿ ಅಧ್ಯಯನಕಾರ ಮೊಹಮ್ಮದ್ ಮಗ್ನಿ ತಿಳಿಸಿದ್ದಾರೆ.
ಸಾಂಕ್ರಾಮಿಕದ ಸಮಯದಲ್ಲಿ ಹೆಣ್ಣುಮಕ್ಕಳಲ್ಲಿ ತೂಕ ಹೆಚ್ಚಳ ಜೊತೆಗೆ ಅವಧಿಪೂರ್ವ ಪ್ರೌಢಾವಸ್ಥೆ ಹೆಚ್ಚುತ್ತಿರುವುದನ್ನು ನಾವು ಪತ್ತೆ ಮಾಡಿದೆವು. ದೇಹದ ತೂಕ ಶೀಘ್ರವಾಗಿ ಹೆಚ್ಚುವುದು ಕೂಡ ಪ್ರೌಢಾವಸ್ಥೆಯ ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿದೆ.
ಇಟಲಿಯಲ್ಲಿ ನಡೆದ ಅಧ್ಯಯನ: ಈ ಹಿನ್ನೆಲೆಯಲ್ಲಿ ಸಂಶೋಧಕರು ಕೋವಿಡ್‌ಗೆ ಮುನ್ನ ಮತ್ತು ಕೋವಿಡ್ ಬಳಿಕ ಪ್ರೌಢಾವಸ್ಥೆಗೆ ತಲುಪಿದ 133 ಹುಡುಗಿಯರ ಮೇಲೆ ಮೌಲ್ಯಮಾಪನ ನಡೆಸಿದರು. ಈ ವೇಳೆ ಕೋವಿಡ್ ಮತ್ತು ಸಾಂಕ್ರಾಮಿಕ ಸಂಬಂಧಿ ಜೀವನಶೈಲಿ ಬದಲಾವಣೆಗಳನ್ನು ನಡುವಿನ ಸಂಬಂಧವನ್ನು ಪರಿಶೀಲನೆ ನಡೆಸಿದರು. ಅಧ್ಯಯನದಲ್ಲಿ ಕೋವಿಡ್‌ಗೆ ಮುನ್ನ ಅಂದರೆ ಜನವರಿ 2016ರಿಂದ ಮಾರ್ಚ್ 2020ರ ಒಳಗೆ 72 ಪ್ರಕರಣದಲ್ಲಿ ಹೆಣ್ಣುಮಕ್ಕಳು ಅವಧಿಪೂರ್ವ ಪ್ರೌಢಾವಸ್ಥೆ ತಲುಪಿದ್ದಾರೆ. 61 ಪ್ರಕರಣದಲ್ಲಿ ಮಾರ್ಚ್ 2020ರಿಂದ ಜೂನ್ 2021ರವರೆಗೆ ಹೆಣ್ಣುಮಕ್ಕಳು ಪ್ರೌಢಾವಸ್ಥೆ ಕಂಡಿದ್ದಾರೆ. ಅಂದರೆ ತಿಂಗಳಲ್ಲಿ ನಾಲ್ಕು ಮಕ್ಕಳು ಅವಧಿ ಪೂರ್ವ ಋತುಮತಿಯಾಗಿದ್ದಾರೆ.
ಕಳಪೆ ಜೀವನ ಶೈಲಿ: ಕೋವಿಡ್ ಸಮಯದಲ್ಲಿ ಮಕ್ಕಳು ಅಧಿಕ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್)ಗೆ ಒಳಗಾದ ಮಕ್ಕಳು ಈ ಅವಧಿಪೂರ್ವ ಪ್ರೌಢಾವಸ್ಥೆ ತಲುಪಿದ್ದಾರೆ. ಹೆಣ್ಣುಮಕ್ಕಳು ದಿನದಲ್ಲಿ ಸರಾಸರಿ 2 ಗಂಟೆ ಎಲೆಕ್ಟ್ರಾನಿಕ್ ಸಾಧನದಲ್ಲಿ ಕಳೆಯುತ್ತಿದ್ದು, ಶೇ 88.5ರಷ್ಟು ದೈಹಿಕ ಚಟುವಟಿಕೆಗಳನ್ನು ನಿಲ್ಲಿಸಿದ್ದಾರೆ. ಒತ್ತಡ, ಸಾಮಾಜಿಕ ಪ್ರತ್ಯೇಕೀಕರಣ, ಪೋಷಕರ ನಡುವಿನ ಘರ್ಷಣೆಗಳ ಹೆಚ್ಚಳ, ಆರ್ಥಿಕ ಸ್ಥಿತಿಗತಿ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಸೇರಿದಂತೆ ಹಲವು ಅಂಶಗಳು ಹೆಣ್ಣುಮಕ್ಕಳಲ್ಲಿ ಬಲು ಬೇಗ ಋತುಮತಿಯಾಗಲು ಕಾರಣವಾಗುತ್ತಿದೆ. ಆದಾಗ್ಯೂ ಜೈವಿಕ ರೂಪಾಂತರ ಪರಿಣಾಮವನ್ನು ಇಲ್ಲಿ ತೊಡೆದು ಹಾಕಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: Menstrual cup: ಮುಟ್ಟಿನ ಕಪ್: ಮಹಿಳೆಯರು ತಿಳಿಯಲೇ ಬೇಕಿರುವ ವಿಚಾರಗಳಿವು..