ಹೈದರಾಬಾದ್ : ಸುಡುವ ಬೇಸಿಗೆಯಲ್ಲಿ ಐಸ್ ಕೋಲ್ಡ್ ಆಗಿರುವ ನೀರು ಕುಡಿದಾಗ ಗಂಟಲು ಮತ್ತು ದೇಹಕ್ಕೆ ಅದೆಷ್ಟೋ ಹಿತವೆನಿಸುತ್ತದೆ. ಆದರೆ ತಂಪಾದ ನೀರು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುದು ಕೂಡ ಸತ್ಯ. ರೆಫ್ರಿಜರೇಟರ್‌ನಲ್ಲಿನ ತಣ್ಣೀರು ಶೀತವನ್ನು ಉಂಟುಮಾಡುವ ಮೂಲಕ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ತೊಂದರೆಗಳನ್ನು ಉಂಟುಮಾಡುತ್ತದೆ ಎಂಬುದು ಸಾಕಷ್ಟು ಜನರಿಗೆ ತಿಳಿಸಿದೆ. ಆದರೆ ಇಷ್ಟು ಮಾತ್ರವಲ್ಲದೇ ತಣ್ಣೀರಿನಿಂದ ಇನ್ನೂ ಹೆಚ್ಚಿನ ಅನಾರೋಗ್ಯ ಉಂಟಾಗಬಹುದು. ತಣ್ಣೀರು ಅಥವಾ ಐಸ್ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಹೃದಯದ ಸಮಸ್ಯೆಗಳು ಎದುರಾಗಬಹುದು ಮತ್ತು ನಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.
ಅಲೋಪತಿ, ಆಯುರ್ವೇದ ಮತ್ತು ನ್ಯಾಚುರೋಪತಿಯಂತಹ ವಿವಿಧ ವೈದ್ಯಕೀಯ ವಿಧಾನಗಳು ಕೊಠಡಿಯ ತಾಪಮಾನ ಅಥವಾ ಸಾಮಾನ್ಯ ತಾಪಮಾನ ಹೊಂದಿರುವ ನೀರನ್ನೇ ಕುಡಿಯಬೇಕು ಎಂಬ ಬಗ್ಗೆ ಒತ್ತಿ ಹೇಳಿವೆ. ಕುಡಿಯುವ ನೀರಿನ ವಿಚಾರದಲ್ಲಿ ಆಯುರ್ವೇದದಲ್ಲಿ ಹಲವು ನಿಯಮಗಳನ್ನು ವಿಧಿಸಲಾಗಿದೆ ಎನ್ನುತ್ತಾರೆ ಹರಿದ್ವಾರದ ಆಯುರ್ವೇದ ವೈದ್ಯ ರಾಮೇಶ್ವರ ಶರ್ಮಾ. ಉದಾಹರಣೆಗೆ, ಕುಳಿತುಕೊಂಡು ನೀರು ಕುಡಿಯಬೇಕು, ಯಾವಾಗಲೂ ಕೋಣೆಯ ಉಷ್ಣಾಂಶ ಹೊಂದಿರುವ ನೀರು ಕುಡಿಯಬೇಕು, ಊಟದ ಸಮಯದಲ್ಲಿ ತಣ್ಣೀರು ಕುಡಿಯಬಾರದು, ಊಟದ ನಂತರ ಉಗುರು ಬೆಚ್ಚಗಿನ ನೀರನ್ನು ಮಾತ್ರ ಕುಡಿಯಬೇಕು ಇತ್ಯಾದಿ ನಿಯಮಗಳಿವೆ.
ತಣ್ಣೀರು ಏಕೆ ಕುಡಿಯಬಾರದು:ತಣ್ಣೀರು ಜೀರ್ಣಾಂಗ ವ್ಯವಸ್ಥೆಯಲ್ಲಿನ ಜೀರ್ಣಕಾರಿ ಬೆಂಕಿಯನ್ನು ಕಡಿಮೆ ಮಾಡುತ್ತದೆ ಎಂಬ ಕಾರಣದಿಂದ ಆಹಾರದೊಂದಿಗೆ ಅಥವಾ ಸಾಮಾನ್ಯವಾಗಿ ತಣ್ಣೀರು ಕುಡಿಯುವುದನ್ನು ತಪ್ಪಿಸಬೇಕು ಎಂದು ಆಯುರ್ವೇದ ಹೇಳುತ್ತದೆ. ಜೀರ್ಣಕಾರಿ ಬೆಂಕಿ ಅಥವಾ 'ಜಠರಾಗ್ನಿ' ಜೀರ್ಣಾಂಗ ವ್ಯವಸ್ಥೆಯ ಎಲ್ಲ ಕಾರ್ಯಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ, ಆಹಾರದ ಮೂಲಗಳಿಂದ ಗರಿಷ್ಠ ಪ್ರಮಾಣದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ಇತರ ಚಟುವಟಿಕೆಗಳು ಸಹ ಸರಿಯಾಗಿ ನಡೆಯುವುದನ್ನು ಖಚಿತಪಡಿಸುತ್ತದೆ. ನೀರು ತಣ್ಣಗಿದ್ದಷ್ಟೂ ಅದು ಜೀರ್ಣಕಾರಿ ಬೆಂಕಿಯನ್ನು ಕಡಿಮೆ ಮಾಡುತ್ತದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.