ಡಾ ಚಿದಂಬರಂ ಅವರೊಂದಿಗಿನ ಸಂದರ್ಶನ ಮೈಸೂರು:ಚಳಿಗಾಲದಲ್ಲಿ ಕಾಡುವ ಕೆಮ್ಮು, ನೆಗಡಿ, ಗಂಟಲು ಕೆರೆತ, ತಲೆನೋವು ಹಾಗೂ ಜ್ವರದಂತ ಸಾಂಕ್ರಾಮಿಕ ರೋಗಗಳ ಬಗ್ಗೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಎಸ್. ಚಿದಂಬರಂ ಅವರು 'ಈಟಿವಿ ಭಾರತ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಡಿಸೆಂಬರ್, ಜನವರಿ ಚಳಿಗಾಲವಾದ್ದರಿಂದ ಸಾಮಾನ್ಯವಾಗಿ ಕೆಮ್ಮು, ನೆಗಡಿ, ಗಂಟಲು ಕೆರೆತ, ಜ್ವರ, ತಲೆನೋವಿನಂತಹ ಸಾಂಕ್ರಾಮಿಕ ರೋಗಗಳು ದೊಡ್ಡವರಲ್ಲಿ ಹಾಗೂ ಮಕ್ಕಳಲ್ಲಿ ಕಂಡು ಬರುತ್ತವೆ. ಆದರೆ, ಇದು ಚಳಿಗಾಲದಲ್ಲಿ ವಾತಾವರಣ ಬದಲಾವಣೆಯಿಂದ ಕಂಡುಬರುವ ಸಾಂಕ್ರಾಮಿಕ ರೋಗಗಳಾಗಿವೆ. ಇವುಗಳ ಬಗ್ಗೆ ಅಸಡ್ಡೆ ತೋರಿದರೆ ಮನೆ ಮಂದಿಗೆಲ್ಲ ಹರಡುವ ಸಾಧ್ಯತೆ ಇರುತ್ತದೆ. ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಹಾಗೂ ಸಲಹೆ ಪಡೆಯುವುದು ಒಳಿತು ಎನ್ನುತ್ತಾರೆ ಡಾ. ಚಿದಂಬರಂ.
ಅರಿಶಿಣದ ನೀರನ್ನು ಕುಡಿಯಬೇಕು: ಈ ಸಾಂಕ್ರಾಮಿಕ ರೋಗಗಳು ಮೈಮರೆತರೆ ಇತರರಿಗೂ ಹರಡುತ್ತವೆ. ಆ ಬಗ್ಗೆ ಗಮನ ಹರಿಸಬೇಕು. ಜೊತೆಗೆ ಕೋವಿಡ್ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿದ ರೀತಿಯಲ್ಲಿ ಆಗಾಗ್ಗೆ 20 ರಿಂದ 30 ಸೆಕೆಂಡ್ ಕೈಯನ್ನು ತೊಳೆಯುತ್ತ ಇರಬೇಕು. ಅರಿಶಿಣವನ್ನ ಕುದಿಸಿ ಆರಿಸಿದ ನೀರಿನಲ್ಲಿ ಬೆರೆಸಿ ಕುಡಿಯಬೇಕು ಎಂದು ಸಲಹೆ ನೀಡಿದರು.
ರೆಫ್ರಿಜರೇಟರ್ನಲ್ಲಿರುವ ವಸ್ತುಗಳನ್ನು ಬಳಸಬಾರದು: ಚಳಿಗಾಲದಲ್ಲಿ ವಾಕಿಂಗ್ ಮಾಡುವವರು ಶೀತ ಗಾಳಿ ಬೀಸುತ್ತಿರುವುದರಿಂದ ತಲೆ ಮತ್ತು ಕಿವಿಗೆ ಬೆಚ್ಚನೆಯ ಉಣ್ಣೆಯ ಬಟ್ಟೆಗಳನ್ನು ಧರಿಸಬೇಕು, ಬಿಸಿ ಬಿಸಿಯಾದ ಊಟ ಮಾಡಬೇಕು ಮತ್ತು ಸಾಧ್ಯವಾದಷ್ಟು ರೆಫ್ರಿಜರೇಟರ್ನಲ್ಲಿ ಇರುವ ವಸ್ತುಗಳನ್ನು ಬಳಸಬಾರದು ಎಂದು ಡಾ. ಚಿದಂಬರಂ ಅವರು ಜನತೆಗೆ ಸಲಹೆ ನೀಡಿದರು.
ಓದಿ:ಚಳಿಗಾಲದಲ್ಲಿ ಒಣ ಚರ್ಮ, ತಲೆ ಹೊಟ್ಟಿನ ಸಮಸ್ಯೆ ಕಾಡುತ್ತಿದ್ಯಾ?; ಇಲ್ಲಿದೆ ಪರಿಹಾರ