ಬೆಂಗಳೂರು: ಮಳೆಗಾಲದಲ್ಲಿ ಋತುಮಾನದ ರೋಗಗಳು ಅಪಾಯವನ್ನು ತಂದೊಡ್ಡಬಹುದು ಎಂದು ಡಾ ಎಂ. ವಿ ರಾವ್ ತಿಳಿಸಿದ್ದಾರೆ. ಮಳೆಗಾಲದ ರೋಗಗಳು ಮಾರಣಾಂತಿಕವೂ ಆಗುವ ಹಿನ್ನೆಲೆ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ಅಗತ್ಯ. ಅದರಲ್ಲೂ ಸೊಳ್ಳೆ ಸಂಬಂಧಿತ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್ಗುನ್ಯಾ ಸೇರಿದಂತೆ ಉಸಿರಾಟದ ಸಮಸ್ಯೆ ಹಾಗೂ ಚರ್ಮ ಸಂಬಂಧಿ ಸಮಸ್ಯೆಗಳು ಕಾಡಬಹುದು. ಇದರ ಹೊರತಾಗಿ ಈ ಸಮಯದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಅತಿಸಾರದ ಸಮಸ್ಯೆ ಕೂಡ ಕಾಡಬಹುದು. ಈ ಹಿನ್ನೆಲೆ ಸೋಂಕು ಬಂದಾಕ್ಷಣ ಅದಕ್ಕೆ ಚಿಕಿತ್ಸೆ ನಡೆಸುವುದರಿಂದ ಆರೋಗ್ಯ ಸಮಸ್ಯೆ ಕಡಿಮೆ ಮಾಡಬಹುದು ಎಂದಿದ್ದಾರೆ.
ಮಳೆಯಾಗುತ್ತಿದ್ದಂತೆ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಆರಂಭಿಸಲು ಮುಂದಾಗುತ್ತವೆ. ಮಳೆ ಹೆಚ್ಚಾದಂತೆ ಈ ಸೊಳ್ಳೆಗಳು ರೋಗವನ್ನು ಹರಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಗುನ್ಯಾ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿ ಎರಡು ಮತ್ತು ಮೂರು ವರ್ಷಕ್ಕೆ ಒಮ್ಮೆ ಈ ಡೆಂಗ್ಯೂ ರೋಗಗಳು ಉಲ್ಬಣವಾಗುತ್ತವೆ. ಇದರ ಜೊತೆಗೆ ಮಲೇರಿಯಾ ಮತ್ತು ಚಿಕೂನ್ಗುನ್ಯಾ ಜ್ವರ ಕೂಡ ಹೆಚ್ಚಾಗುತ್ತದೆ.
ಸೊಳ್ಳೆ ಸಂತಾನೋತ್ಪತ್ತಿ ಸಮಯ:ಪ್ರತಿ ಋತುಮಾನದಲ್ಲಿ ಸೊಳ್ಳೆ ಆಧಾರಿತ ಸಮಸ್ಯೆ ಕಾಡುವುದು ಸಹಜ. ಇದರಿಂದ ಅನೇಕ ಮಂದಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಇದು ಅನಾರೋಗ್ಯವೂ ನಿಮ್ಮ ಕೆಲಸ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿನ ಪತ್ತೆಯನ್ನು ಆರಂಭದಲ್ಲೇ ಗುರುತಿಸುವುದು ಅಗತ್ಯ. ಡೆಂಗ್ಯೂ ಮತ್ತು ಮಲೇರಿಯಾವನ್ನು ಆರಂಭದಲ್ಲೇ ರಾಪಿಡ್ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ಈ ಸಂಬಂದ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಣ್ಣ ಪ್ರಯೋಗಾಲಯಗಳಲ್ಲೂ ಕಿಟ್ ಲಭ್ಯವಿದೆ. ಈ ಋತುಮಾನದಲ್ಲಿ ಜ್ವರ ಕಾಣಿಸಿಕೊಂಡರೆ ಮಲೇರಿಯಾ ಪರೀಕ್ಷೆಗೆ ಒಳಗಾಗುವುದು ಕೂಡ ಅವಶ್ಯವಾಗಿದೆ. ಆರಂಭದಲ್ಲೇ ಇದರ ಪತ್ತೆ ಮಾಡಿ, ಚಿಕಿತ್ಸೆ ಪಡೆಯುವುದರಿಂದ ವೆಚ್ಚವೂ ಕಡಿಮೆ ಆಗಿದೆ. ವಿಳಂಬ ಮಾಡಿದರೆ, ಇದು ಅಂಗಾಂಗಗಳಿಗೆ ಹಾನಿ ಮಾಡಿ, ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು. ಒಂದು ವೇಳೆ ಅತಿಸಾರ ಕಾಣಿಸಿಕೊಂಡರೆ ಇದು ಬೇರೆಯವರಿಗೆ ಹರಡುವ ಮುನ್ನ ತಡೆಯುವುದು ಸೂಕ್ತ. ಮಳೆಗಾಲದಲ್ಲಿ ಸಣ್ಣ ಮಕ್ಕಳು ಮತ್ತು ಹಿರಿಯರನ್ನು ಅತಿಯಾದ ತಂಡಿ ವಾತಾವರಣಕ್ಕೆ ತೆರೆದುಕೊಳ್ಳದಂತೆ ನೋಡಿಕೊಳ್ಳುವುದು ಅವಶ್ಯ.
ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು: ಸೊಳ್ಳೆ ಕಡಿತ ತಪ್ಪಿಸಬೇಕು. ಮಕ್ಕಳ ವಿಚಾರದಲ್ಲಿ ಜಾಗೃತೆ ಇರಲಿ. ಪೋಷಕರ ಜೊತೆ ಶಾಲೆಗಳು ಕೂಡ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಶುದ್ಧ ಮತ್ತು ಶೋಧಿಸಿದ ನೀರಿನ ಬಳಕೆ ಮಾಡಿ. ಶಾಲಾ ಕೊಠಡಿಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ಶಿಕ್ಷಕರು ಈ ಬಗ್ಗೆ ಎಚ್ಚರ ವಹಿಸಬೇಕು.