ಹೈದರಾಬಾದ್:ಬೇವಿನ ಅಂಶವನ್ನು ಔಷಧಿಯಾಗಿ ಬಳಸುತ್ತೇವೆ. ಬ್ಯಾಕ್ಟೀರಿಯಾ ವಿರೋಧಿ, ಆ್ಯಂಟಿಫಂಗಲ್ನಂತಹ ಗುಣಲಕ್ಷಣ ಇದರಲ್ಲಿದೆ. ಆದರೆ, ಇದೇ ಬೇವಿನ ಮರಗಳಿಗೆ ಕೀಟ ಮತ್ತು ರೋಗ ಬಾಧೆ ತಪ್ಪಿಲ್ಲ ಎಂಬುದು ಅಚ್ಚರಿಯ ಸಂಗತಿ. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಲ್ಲಿ ಕೆಲವು ವರ್ಷಗಳಿಂದ ಬೇವಿನ ಚಿಗುರು ಒಣಗಿ ಮರಗಳು ಸಾಯುತ್ತಿವೆ.
ಬೇವಿನ ಮರಗಳಿಗೆ ಅಪಾಯವನ್ನುಂಟು ಮಾಡುವ ರೋಗವನ್ನು ಡೈಬ್ಯಾಕ್ ಎಂದು ಗುರುತಿಸಲಾಗಿದೆ. ಈ ವರ್ಷ ಹಲವು ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಇದು ಕಾಣಿಸಿಕೊಂಡಿದೆ. ಡೈಬ್ಯಾಕ್ ರೋಗ ಎಲೆಗಳು, ಕೊಂಬೆಗಳು ಮತ್ತು ಚಿಗುರಿನ ಮೇಲೆ ದಾಳಿ ಮಾಡಿ, ಅದು ಮರದ 100 ಪ್ರತಿಶತದಷ್ಟು ಮರದ ಬೆಳವಣಿಗೆಯನ್ನು ಕುಂದಿಸುತ್ತದೆ ಎಂದು ತೆಲಂಗಾಣದ ಅರಣ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಜಗದೀಶ್ ಬತ್ತುಲಾ ಹೇಳಿದರು.
1990 ರ ದಶಕದಲ್ಲಿ ಉತ್ತರಾಖಂಡದ ಡೆಹ್ರಾಡೂನ್ ಬಳಿ ದೇಶದಲ್ಲಿಯೇ ಮೊದಲ ಬಾರಿಗೆ ಡೈಬ್ಯಾಕ್ ರೋಗ ವರದಿಯಾಗಿತ್ತು. ಬಳಿಕ ಅದು ವ್ಯಾಪಿಸಿ 2019 ರಲ್ಲಿ ತೆಲಂಗಾಣದಲ್ಲಿ ಮೊದಲ ಬಾರಿಗೆ ಅಡಿ ಇಟ್ಟಿತು. ಮೂರು ವರ್ಷಗಳ ಹಿಂದೆ ಪತ್ತೆಯಾಗಿದ್ದ ಡೈಬ್ಯಾಕ್ ರೋಗ ಬಳಿಕ ಕ್ಷೀಣಿಸಿತ್ತು. ಈ ವರ್ಷ ಮತ್ತೆ ಕಾಣಿಸಿಕೊಂಡಿದೆ. ಇದು ಮುಖ್ಯವಾಗಿ ಫೋಮೊಪ್ಸಿಸ್ ಅಜಾಡಿರಾಕ್ಟೆ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.