ಕರ್ನಾಟಕ

karnataka

ETV Bharat / sukhibhava

Dengue flu: ನೆರೆಪೀಡಿತ ದೆಹಲಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ - ಹೆಚ್ಚಾದ ಪರಿಣಾಮ ನೀರಿನ ಸಂಬಂಧಿ ರೋಗ

ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಪ್ರಕರಣಗಳು ಹೆಚ್ಚುವುದು ಸಹಜ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅವಶ್ಯಕ.

Dengue cases on the rise in Delhi
Dengue cases on the rise in Delhi

By

Published : Jul 12, 2023, 10:40 AM IST

ನವದೆಹಲಿ: ಭಾರಿ ಮಳೆಯಿಂದಾಗಿ ರಾಜಧಾನಿ ದೆಹಲಿಯ ಜನರು ಈಗಾಗಲೇ ನಲುಗಿ ಹೋಗಿದ್ದಾರೆ. ಈ ನಡುವೆ ನೀರಿನ ಹರಿವು ಹೆಚ್ಚಾದ ಪರಿಣಾಮ ರೋಗಗಳು ಉಲ್ಬಣಗೊಂಡಿವೆ. ಡೆಂಗ್ಯೂ ಜ್ವರ ಮತ್ತು ಗ್ಯಾಸ್ಟ್ರೋಎಂಟರೈಟಿಸ್ ರೋಗಗಳ ಪ್ರಕರಣಗಳು ಹೆಚ್ಚುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಾರಿ ಮುಂಬೈಗೆ ಮಳೆ 14 ದಿನ ತಡವಾಗಿಯೂ, ದೆಹಲಿಗೆ ಎರಡು ದಿನ ಮೊದಲೇ ಆಗಮಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ದೆಹಲಿಯಲ್ಲಿ ಡೆಂಗ್ಯೂ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ಹವಾಮಾನ ಬದಲಾವಣೆ. ಮಾನ್ಸೂನ್​ ಋತುಮಾನದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸರಾಸರಿ 10-15 ವಿವಿಧ ರೀತಿಯ ಜ್ವರ ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ 5-6 ಡೆಂಗ್ಯೂ ಪ್ರಕರಣಗಳೇ ಆಗಿವೆ ಎಂದು ದೆಹಲಿಯ ಪ್ರಿಮುಸ್​ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯ ಎಚ್​ಒಡಿ ಡಾ. ಅನುರಾಗ್​ ಸಕ್ಸೆನಾ ಹೇಳಿದರು.

ರೋಗಿಗಳ ಸಂಖ್ಯೆ ಹೆಚ್ಚಳ: ಪ್ರತಿನಿತ್ಯ ಏಳೆಂಟು ರೋಗಿಗಳು ತೀವ್ರ ಜ್ವರ, ತಲೆನೋವು, ಕೀಲು ಮತ್ತು ಸ್ನಾಯು ನೋವಿನಂತಹ ಪ್ರಕರಣಗಳಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಕೆಲವು ರೋಗಿಗಳು ಆಯಾಸ, ವಾಂತಿ, ಅತಿಸಾರ, ಹೊಟ್ಟೆ ನೋವಿನಂತಹ ಗ್ಯಾಸ್ಟ್ರೋಎಂಟರೈಟಿಸ್​ ಸಮಸ್ಯೆಯಿಂದಲೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮತ್ತೆ ಕೆಲವರಲ್ಲಿ ಜ್ವರ, ಮೂಗು ಕಟ್ಟುವಿಕೆ, ಕೆಮ್ಮು, ಆಯಾಸದಂತಹ ಪ್ರಕರಣಗಳು ಕಂಡುಬರುತ್ತಿದೆ ಎಂದು ವಿವರಣೆ ನೀಡಿದರು.

ಗುರುಗ್ರಾಮ್​ನಲ್ಲೂ ಜ್ವರ, ಟೈಫಾಯ್ಡ್​​, ಜಾಂಡೀಸ್, ಹೊಟ್ಟೆ ನೋವು ಮತ್ತು ವಾಂತಿಯಂತಹ ಹಲವು ಸಮಸ್ಯೆಯಿರುವ ರೋಗಿಗಳ ಸಂಖ್ಯೆ ಶೇ 15ರಿಂದ 20 ಹೆಚ್ಚಾಗಿದೆ. ಇದಕ್ಕೆ ಕಾರಣ ಕಲುಷಿತ ಆಹಾರ ಮತ್ತು ನೀರು ಸೇವನೆ. ತಾಪಮಾನ ಮತ್ತು ಉಷ್ಣಾಂಶ ಬದಲಾವಣೆಯೂ ಕಾರಣವಾಗುತ್ತಿದೆ ಎಂದು ಗುರುಗ್ರಾಮದ ಸಿ.ಕೆ. ಬಿರ್ಲಾ ಆಸ್ಪತ್ರೆಯ ತುಷಾರ್​​ ಟಯಲ್​ ಮಾಹಿತಿ ನೀಡಿದರು. ​

ಈ ರೋಗಗಳಿಂದಾಗಿ ಎಲ್ಲ ವಯೋಮಾನದ ಜನರು ದೈಹಿಕವಾಗಿ ದುರ್ಬಲಗೊಳ್ಳುತ್ತಾರೆ. ಶಿಶುಗಳು ಮತ್ತು ಹಿರಿಯ ನಾಗರಿಕರು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಾರೆ. ನಿಂತ ನೀರು, ಆದ್ರತೆ, ಸೊಳ್ಳೆಗಳ ಸಂತಾನದಿಂದ ಸಮಸ್ಯೆಗಳು ಕಾಡುತ್ತವೆ. ಚರ್ಮ ಸೋಂಕಿನ ಸಮಸ್ಯೆಗಳು ಹೆಚ್ಚುತ್ತವೆ ಎಂದು ದೆಹಲಿಯ ಫೋರ್ಟಿಸ್​ ಆಸ್ಪತ್ರೆಯ ಡಾ. ಅಜಯ್​ ಅಗರ್ವಾಲ್ ಎಚ್ಚರಿಸಿದರು.

ಚರ್ಮದಲ್ಲಿ ಫಂಗಲ್​ ಮತ್ತು ಬ್ಯಾಕ್ಟೀರಿಯಾ ಸೋಂಕುಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚುತ್ತವೆ. ರಿಂಗ್​ವರ್ಮ್​, ಪಾದದಲ್ಲಿ ತುರಿಕೆಯಂತಹ ಸಮಸ್ಯೆ ಕಾಡುತ್ತದೆ. ಇದಕ್ಕೆ ಕಾರಣ ಚರ್ಮದಲ್ಲಿ ದೀರ್ಘಕಾಲದವರೆಗೆ ತೇವಾಂಶ ಉಳಿದಿರುವುದು.

ವಾಹಕದಿಂದ ಹರಡುವ ರೋಗಗಳು ಮಾನ್ಸೂನ್​ನಲ್ಲಿ ಹೆಚ್ಚು. ದೆಹಲಿಯಲ್ಲಿ ಈ ವರ್ಷ ಮಲೇರಿಯಾ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಇದು ಮೇ ಆರಂಭದಲ್ಲಿ ಶುರುವಾದ ಅಕಾಲಿಕ ಮಳೆಯ ಪರಿಣಾಮ. ಇದರ ಹೊರತಾಗಿ ಚಿಕುನ್​ಗುನ್ಯಾ ಮತ್ತು ಕಾಂಜಂಕ್ಟಿವಿಟಿಸ್‌ನಂತಹ ಋತುಮಾನದ ಜ್ವರಗಳು ಜಾಸ್ತಿಯಾಗುತ್ತಿವೆ.

ರಕ್ಷಣೆ ಹೇಗೆ?: ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನಾಭಿವೃದ್ಧಿ ನಡೆಸುತ್ತವೆ. ಹೀಗಾಗಿ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಶುದ್ಧ ನೀರು ಸೇವನೆ ಪ್ರಮುಖ ಆದ್ಯತೆ ಆಗಬೇಕು. ನೀರನ್ನು ಕುದಿಸಿ, ಶೋಧಿಸಿ ಕುಡಿಯುವುದು ಮತ್ತಷ್ಟು ಉತ್ತಮ. ಸೀನುವಾಗ, ಕೆಮ್ಮುವಾಗ ಕರವಸ್ತ್ರವನ್ನು ಬಾಯಿ ಮತ್ತು ಮೂಗಿಗೆ ಅಡ್ಡವಾಗಿ ಹಿಡಿಯಿರಿ. ಸೊಳ್ಳೆಗಳಿಂದ ರಕ್ಷಣೆಗೆ ನೆಟ್​​, ಕಾಯಿಲ್​ ಬಳಕೆ ಮಾಡಿ. ಚರ್ಮದಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳಿ. ಪಾದದಲ್ಲಿ ಫಂಗಲ್​ ಸೋಂಕು ಹೆಚ್ಚುವ ಹಿನ್ನೆಲೆಯಲ್ಲಿ ಡ್ರೈ ಪೌಡರ್​ ಹಾಕಿ. ಶುದ್ದ, ಬಿಸಿಯಾದ ಆಹಾರ ಸೇವಿಸಿ. ರಸ್ತೆ ಬದಿ ಆಹಾರ ಸೇವಿಸುವುದು ಉತ್ತಮವಲ್ಲ ಎಂಬುದು ವೈದ್ಯರ ಸೂಚನೆ.

ಇದನ್ನೂ ಓದಿ:ನೆರೆ ದೇಶ ಬಾಂಗ್ಲಾದಲ್ಲಿ ಡೆಂಗ್ಯೂ ಜ್ವರ ಉಲ್ಬಣ: ಲಕ್ಷಣಗಳೇನು? ರಕ್ಷಣೆ ಹೇಗೆ? ಸಂಪೂರ್ಣ ಮಾಹಿತಿ..

ABOUT THE AUTHOR

...view details