ಕೋವಿಡ್ ವೈರಸ್ ಸ್ವತಃ ರೂಪಾಂತರಗೊಳ್ಳುತ್ತಿದ್ದು ಸ್ವಾಭಾವಿಕವಾಗಿಯೇ ಅದರ ಲಕ್ಷಣಗಳಲ್ಲೂ ಬದಲಾವಣೆಯಾಗುತ್ತಿದೆ. ಕೋವಿಡ್ನ ಮೊದಲ ಅಲೆ ಹಾಗೂ ಪ್ರಸ್ತುತ ಅಲೆಗಳ ನಡುವೆ ರೋಗಲಕ್ಷಣಗಳ ನಡುವೆ ಸಾಕಷ್ಟು ಬದಲಾವಣೆಯಾಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಹಾಗಾದರೆ ನಾವು ತಿಳಿದು ಕೊಳ್ಳಬೇಕಾದ ಹೊಸ ಅಂಶಗಳು ಯಾವುವು?
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದರೂ, ವೈರಸ್ ಇನ್ನೂ ರೂಪಾಂತರಗೊಳ್ಳುತ್ತಿದೆ. ಜನರು ಮಾಸ್ಕ್, ಕೈ ಶುಚಿತ್ವ ಹಾಗೂ ಸಾಮಾಜಿಕ ಅಂತರವನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳದೇ ಇದ್ದರೆ ಮೂರನೇ ಅಲೆಗೆ ಸಿಲುಕಬೇಕಾಗುತ್ತದೆ.
ಬ್ರಿಟನ್ನಿಂದ ಒಂದು ರೂಪಾಂತರಿ, ದ.ಆಫ್ರಿಕಾದ ಒಂದು ರೂಪಾಂತರಿ ಹಾಗೂ ಭಾರತದ ಒಂದು ರೂಪಾಂತರಿ.. ಹೀಗೆ ಕೊರೊನಾವು ವಿವಿಧ ರೂಪಾಂತರವಾಗಿ ರೋಗಿಗಳಲ್ಲಿ ವಿವಿಧ ರೀತಿಯ ರೋಗಲಕ್ಷಣಗಳಿಗೆ ಕಾರಣವಾಗಿದೆ. ಆದರೆ ಡೆಲ್ಟಾ ರೂಪಾಂತರವು ಹಲವು ಬಗೆಯ ರೋಗ ಲಕ್ಷಣ ಹೊಂದಿದ್ದು, ಮಾರಣಾಂತಿಕವೂ ಹೌದು.
ವೈರಸ್ ರೂಪಾಂತರ ಏಕೆ?
ಕಳೆದ ಒಂದೂವರೆ ವರ್ಷದಿಂದಲೂ ವಿಶ್ವವನ್ನು ಈ ಕೊರೊನಾ ವೈರಸ್ ಕಾಡುತ್ತಿದೆ. ಅಂದಿನಿಂದ ಇಂದಿನವರೆಗೂ ರೂಪಾಂತರಗೊಳ್ಳುತ್ತಲೂ ಇದೆ. ಆರಂಭದಲ್ಲಿ ಜ್ವರ, ನೆಗಡಿ ಮತ್ತು ತಲೆನೋವು ಈ ವೈರಸ್ನ ಪ್ರಮುಖ ಲಕ್ಷಣವಾಗಿತ್ತು. ಆದರೀಗ ಬದಲಾಗುತ್ತಿರುವ ವೈರಸ್ ಲಕ್ಷಣಗಳು ಹಲವು ರೋಗಿಗಳಲ್ಲಿ ಒಂದೇ ರೀತಿಯ ಲಕ್ಷಣ ಹೊಂದಿಲ್ಲ. ಈ ರೀತಿಯ ಲಕ್ಷಣ ಎದುರಾಗುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮದ ಪ್ರಭಾವ ಹೆಚ್ಚಾಗುತ್ತಿದೆ.