ಹೈದರಾಬಾದ್ :ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಒತ್ತಡ, ಆತಂಕ, ಖಿನ್ನತೆಗಳಿಂದ ನಾವು ದೂರ ಇರಬಹುದು. ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಎಂಡಾರ್ಫಿನ್ ಎನ್ನುವ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದು ನಮ್ಮ ಒತ್ತಡ ಹಾಗೂ ಆತಂಕಗಳನ್ನು ಕಡಿಮೆ ಮಾಡಿ ಮನೋಲ್ಲಾಸದ ಭಾವನೆ ಹೆಚ್ಚಿಸುತ್ತದೆ.
ಪ್ರತಿಯೊಬ್ಬರೂ ಉತ್ತಮ ಆರೋಗ್ಯದಿಂದ ದೀರ್ಘಕಾಲದ ಜೀವನವನ್ನು ನಡೆಸಬೇಕು ಎಂದು ಬಯಸುತ್ತಾರೆ. ಈ ಹಿಂದೆ ಹಿರಿಯರು ಗಟ್ಟಿಮುಟ್ಟಾಗಿ ನೂರು ವರ್ಷ ಬದುಕುತ್ತಿದ್ದರು. ಇಳಿ ವಯಸ್ಸಿನಲ್ಲಿ ಸಾಕಷ್ಟು ಲವಲವಿಕೆಯಿಂದ ಇದ್ದವರನ್ನು ನೋಡಿದ್ದೇವೆ. ಆದರೆ, ಈಗ ಕಾಲ ಆ ರೀತಿ ಇಲ್ಲ. 60 ವರ್ಷ ದಾಟಿದರೆ ಸಾಕಪ್ಪ ಎನ್ನುವಂತಾಗಿದೆ.
ಇಷ್ಟು ವರ್ಷಗಳು ಬದುಕಬೇಕು ಎನ್ನುವ ಆಸೆ ಯಾರಲ್ಲೂ ಉಳಿದಿಲ್ಲ. ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರ ಪದ್ಧತಿಗಳು, ಅನುಸರಿಸುತ್ತಿದ್ದ ಚಟುವಟಿಕೆಗಳು, ಅವರು ಜೀವಿಸುತ್ತಿದ್ದ ವಾತಾವರಣ ಯಾವುದು ನಮ್ಮ ಬಳಿ ಇಲ್ಲ.
ಸಣ್ಣ ವಯಸ್ಸಿಗೆ ನಾನಾ ರೀತಿಯ ಕಾಯಿಲೆಗಳು, ಒತ್ತಡ, ಆತಂಕ, ಖಿನ್ನತೆಯಂತ ಸಮಸ್ಯೆಗಳಿಂದ ಜೀವನೋತ್ಸಾಹ ಕುಂದುತ್ತಿದೆ. ಇದರಿಂದ ಹೊರ ಬರಬೇಕಾದರೆ ದೈಹಿಕ ಚಟುವಟಿಕೆಗಳನ್ನು ಮಾಡಬೇಕಿದೆ. ಇದು ಮೆದುಳಿನ ಕ್ರಿಯೆಗೂ ಅನುಕೂಲ ಎಂಬುದು ಸಂಶೋಧನೆಯಿಂದ ಬಹಿರಂಗವಾಗಿದೆ.
50 ರಿಂದ 74 ವರ್ಷ ವಯಸ್ಸಿನವರು ಹೀಗೆ ಮಾಡಬೇಕು..ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯವು ದೈಹಿಕ ಚಟುವಟಿಕೆಗಳಿಂದ ಮೆದುಳಿನ ಕ್ರಿಯೆಗೆ ಹೇಗೆ ಶಕ್ತಿ ತುಂಬುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಿದ್ದು, ಅದರ ವರದಿಯನ್ನು 'ಜೆಎಂಐಆರ್ ಹೆಲ್ತ್ ಆ್ಯಂಡ್ ಹೆಲ್ತ್' ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ.
90 ಮಂದಿ ಮಧ್ಯ ವಯಸ್ಕರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಹಿರಿಯರು ಅನುಸರಿಸುತ್ತಿದ್ದ ದೈಹಿಕ ಚಟುವಟಿಕೆಗಳ ವಿಷಯ ಕುರಿತು ಇವರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ದೈಹಿಕ ಚಟುವಟಿಕೆ ಹೆಚ್ಚಾದ ದಿನಗಳಲ್ಲಿ 50 ರಿಂದ 74 ವರ್ಷ ವಯಸ್ಸಿನವರು ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುತ್ತಾರೆ.