ಬರ್ಲಿನ್/ಜರ್ಮನಿ:ದಿನೇ ದಿನೆ ಎಲ್ಲೆಡೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಡೀ ದೇಶದಲ್ಲಿ ಮಹಾರಾಷ್ಟ್ರವೊಂದರಲ್ಲೇ 5 ಲಕ್ಷ ಪ್ರಕರಣಗಳು ವರದಿಯಾಗಿದ್ದರೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1.96 ಲಕ್ಷ ದಾಟಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಅಥವಾ ಆಗ್ಗಾಗ್ಗೆ ಕೈ ತೊಳೆಯುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಿದರೆ ಕೊರೊನಾದಿಂದ ದೂರ ಉಳಿಯಬಹುದು ಎಂಬ ವಿಚಾರ ನಿಮಗೆ ತಿಳಿದಿದೆ. ಆದರೆ ಇದರೊಂದಿಗೆ ನೀವು ಪ್ರತಿದಿನ ಬಾಯಿಯನ್ನು ಮೌತ್ವಾಶ್ನಿಂದ ತಪ್ಪದೆ ಸ್ವಚ್ಛಗೊಳಿಸಿದರೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಉತ್ತಮ ಮೌತ್ವಾಶ್ಗಳನ್ನು ಬಳಸಿ ನಿಮ್ಮ ಬಾಯಿಯನ್ನು ಪ್ರತಿದಿನ ಸ್ವಚ್ಛಗೊಳಿಸುತ್ತಿದ್ದರೆ ವೈರಸ್ ಹರಡುವ ಸಾಧ್ಯತೆ ಕಡಿಮೆ ಎಂದು ಜರ್ಮನಿಯ ವಿಜ್ಞಾನಿಗಳು ತಿಳಿಸಿರುವುದಾಗಿ ಜಮರ್ನಿಯ ಹೆಲ್ತ್ ಮ್ಯಾಗಜಿನ್ ಒಂದರಲ್ಲಿ ಪ್ರಕಟವಾಗಿದೆ.
ಅಧ್ಯಯನಗಳ ಪ್ರಕಾರ, ಮೌತ್ವಾಶ್ಗಳನ್ನು ಬಳಸುವುದರಿಂದ ವೈರಸ್ ಹರಡುವಿಕೆಯನ್ನು ತಡೆಗಟ್ಟಬಹುದು ಹಾಗೂ ಇದರಿಂದ ಉಸಿರಾಟದ ಸಮಸ್ಯೆಗಳಾಗಲಿ, ಕೂಡಾ ಇರುವುದಿಲ್ಲ ಎನ್ನಲಾಗಿದೆ. ಮೌತ್ವಾಶ್ನಿಂದ ಬಾಯಿಯನ್ನು ಸ್ವಚ್ಛಗೊಳಿಸುವುದರಿಂದ ಜೀವಕೋಶಗಳಲ್ಲಿ ವೈರಸ್ ಉತ್ಪಾದನೆ ತಡೆಯಲು ಸಾಧ್ಯವಿಲ್ಲ. ಆದರೆ ಅಲ್ಪಾವಧಿಯಲ್ಲಿ ವೈರಸ್ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಜರ್ಮನಿ ಬೊಚಮ್ನ ರೊಹ್ರ್ ವಿಶ್ವವಿದ್ಯಾನಿಲಯದ ಸಂಶೋಧಕ ಟೋನಿ ಮೈಸ್ಟರ್ ಹೇಳಿದ್ದಾರೆ ಎನ್ನಲಾಗಿದೆ.
ಈ ಅಧ್ಯಯನ್ನಾಗಿ ಸಂಶೋಧನಾ ತಂಡವು ಜರ್ಮನಿಯ ಫಾರ್ಮಸಿ ಹಾಗೂ ಮೆಡಿಕಲ್ ಸ್ಟೋರ್ಗಳಲ್ಲಿ ಲಭ್ಯವಿರುವ ಸುಮಾರು 8 ಬಗೆಯ ಮೌತ್ವಾಶ್ಗಳನ್ನು ಬಳಸಿಕೊಂಡಿದೆ. ಈ ಎಲ್ಲಾ ಮೌತ್ವಾಶ್ಗಳನ್ನು ವೈರಸ್ ಕಣಗಳೊಂದಿಗೆ ಬೆರೆಸಿ ಸುಮಾರು 30 ಸೆಕೆಂಡ್ಗಳ ಕಾಲ ಅಲುಗಾಡಿಸಿದ ನಂತರ ವೈರಸ್ ಕಣಗಳು ಅಲ್ಲಿ ಕಂಡುಬರಲಿಲ್ಲ ಎಂದು ಸಂಶೋಧಕರ ತಂಡ ತಿಳಿಸಿದೆ.
ಆದರೆ ಕೊರೊನಾ ಸೋಂಕು ತಗುಲಿದ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಮೌತ್ವಾಶ್ಗಳು ಪರಿಣಾಮಕಾರಿಯಾಗಿಲ್ಲ. ಇದರಿಂದ ವೈರಸ್ ಹರಡುವ ಸಾಮರ್ಥ್ಯವನ್ನು ಅಲ್ಪಾವಧಿಯವರೆಗೆ ತಡೆಗಟ್ಟಬಹುದು ಎನ್ನಲಾಗಿದೆ. ಇದರ ಬಗ್ಗೆ ಹೆಚ್ಚಿನ ಅಗತ್ಯ ಇದೆ ಎಂದು ಲೇಖಕರ ಅಭಿಪ್ರಾಯವಾಗಿದೆ.