ಬಿಪಿ ಬಂದಾಗ ಅಥವಾ ಬರುವ ಮೊದಲೇ ಮುನ್ನೆಚ್ಚರ ವಹಿಸುವುದು ಅಗತ್ಯ. ಇದಕ್ಕೆ ಮಾಡಬೇಕಿರುವ ಪ್ರಮುಖ ಕೆಲಸ ಎಂದರೆ, ನಿಮ್ಮ ಆಹಾರದಲ್ಲಿನ ಉಪ್ಪು ಸೇವನೆ ಕಡಿತಗೊಳಿಸುವುದು. ಈ ಉಪ್ಪು ಸೇವನೆ ಕಡಿಮೆ ಮಾಡುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆಯಾ ಎಂಬ ಅನುಮಾನಕ್ಕೆ ಇದೀಗ ಭಾರತೀಯ ಅಮೆರಿಕನ್ ಸಂಶೋಧಕರು ಅಧ್ಯಯನದ ಮೂಲಕ ಉತ್ತರ ನೀಡಿದ್ದಾರೆ. ಈ ಸಂಬಂಧ ಅಧ್ಯಯನ ನಡೆಸಿದ ಅವರು, ರಕ್ತದೊತ್ತಡ ಹೊಂದಿರುವವರು ಕಡಿಮೆ ಉಪ್ಪು ಸೇವನೆ ಮಾಡುವುದರಿಂದ ಒಂದು ವಾರದಲ್ಲಿ ಔಷಧಿಗಳಷ್ಟೇ ಪರಿಣಾಮಕಾರಿ ಪ್ರಯೋಜನವನ್ನು ಪಡೆದಿದ್ದಾರೆ ಎಂದಿದ್ದಾರೆ.
ಕೇವಲ ರಕ್ತದೊತ್ತಡ ಹೊಂದಿರುವವರು ಮಾತ್ರವಲ್ಲದೇ ಸಾಮಾನ್ಯ ಜನರು ಕೂಡ ಒಂದು ಟೀ ಸ್ಪೂನ್ ಉಪ್ಪಿನ ಪ್ರಮಾಣ ಕಡಿಮೆ ಮಾಡುವುದರಿಂದ ಅವರ ಔಷಧಿಗಳು ಒಂದು ವಾರ ಬೀರುವ ಪ್ರಮಾಣವನ್ನೇ ಹೊಂದಿರುತ್ತಾರೆ ಎಂದಿದ್ದಾರೆ. ವಾಂಡರ್‌ಬಿಲ್ಟ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್, ನಾರ್ತ್‌ವೆಸ್ಟರ್ನ್ ಮೆಡಿಸಿನ್ ಮತ್ತು ಬರ್ಮಿಂಗ್ಹ್ಯಾಮ್‌ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯ ಸಂಶೋಧಕರು ಈ ಸಂಬಂಧ ಅಧ್ಯಯನ ನಡೆಸಿದ್ದಾರೆ.
ದಿನಕ್ಕೆ ಒಂದು ಟೀಸ್ಪೂನ್ ಉಪ್ಪು ಕಡಿತ: 50 ರಿಂದ 75 ವರ್ಷದ ಹಿರಿಯರಿಂದ ಮಧ್ಯವಯಸ್ಸಿನವರೆಗಿನ ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ವೇಳೆ ಅವರ ಸಾಮಾನ್ಯ ಆಹಾರ ಪದ್ಧತಿಯಲ್ಲಿ ಪ್ರತಿನಿತ್ಯ ಒಂದು ಟೀ ಸ್ಪೂನ್ ಅಷ್ಟು ಉಪ್ಪನ್ನು ಕಡಿಮೆ ಮಾಡುವಂತೆ ತಿಳಿಸಲಾಗಿತ್ತು.
ಈ ಅಧ್ಯಯನದ ಫಲಿತಾಂಶದಲ್ಲಿ ಭಾಗಿದಾರರ ಸಿಸ್ಟೊಲಿಕ್ ರಕ್ತದೊತ್ತಡವು ಆರು ಮಿಲಿಮೀಟರ್ ಕಡಿಮೆಯಾಗಿದೆ. ಇದರ ಪರಿಣಾಮವೂ ಅಧಿಕ ರಕ್ತದೊತ್ತಡಕ್ಕೆ ಸಾಮಾನ್ಯವಾಗಿ ಬಳಸಲಾಗುವ ಮೊದಲ ಸಾಲಿನ ಔಷಧಿಯಿಂದ ಉತ್ಪತ್ತಿಯಾಗುವ ಪರಿಣಾಮಕ್ಕೆ ಹೋಲಿಸಬಹುದಾಗಿದೆ ಎಂದು ವಿಯುಎಂಸಿ ಅಸೋಸಿಯೇಟ್ ಪ್ರೊಫೆಸರ್ ದೀಪಕ್ ಗುಪ್ತಾ ತಿಳಿಸಿದ್ದಾರೆ.
ಅಧ್ಯಯನದಲ್ಲಿ 213 ಮಂದಿ ಭಾಗಿಯಾಗಿದ್ದು, ಕಡಿಮೆ ಉಪ್ಪಿನ ಡಯಟ್ ವೇಳೆ ಅವರ ಸಿಸ್ಟೊಲಿಕ್ ರಕ್ತದೊತ್ತಡವೂ ಗಮನಾರ್ಹವಾಗಿ 7 ರಿಂದ 8 ಎಂಎಂ ಎಚ್ಜಿಯಷ್ಟು ಕಡಿಮೆಯಾಗಿದೆ. ಒಟ್ಟಾರೆಯಾಗಿ ಶೇ 72ರಷ್ಟು ಭಾಗಿದಾರರಲ್ಲಿ ಉಪ್ಪಿನ ಕಡಿತ ಮಾಡಿರುವುದು ಕಡಿಮೆ ಸಿಸ್ಟೊಲಿಕ್ ರಕ್ತದೊತ್ತಡವನ್ನು ಕಾಣಬಹುದಾಗಿದೆ ಎಂದಿದ್ದಾರೆ.