ನವದೆಹಲಿ:ಕೇಂದ್ರ ಸರ್ಕಾರ ಬೆಂಬಲಿತ ಕೋವಿಡ್-19 ಲಸಿಕೆಯನ್ನು ಫೆಬ್ರವರಿಯಿಂದಲೇ ನಿರೀಕ್ಷಿಸಬಹುದು ಎಂದು ಸರ್ಕಾದ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ.
ನಿರೀಕ್ಷೆಗಿಂತ ತಿಂಗಳು ಮುಂಚೆಯೇ ಕೊನೆಯ ಹಂತದ ಪ್ರಯೋಗಗಳು ಈ ತಿಂಗಳಲ್ಲಿ ಪ್ರಾರಂಭವಾಗಿವೆ. ಅಧ್ಯಯನಗಳು ಈಗಾಗಲೇ ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನ್ನು ತೋರಿಸಿವೆ ಎಂದು ಸರ್ಕಾರದ ಹಿರಿಯ ವಿಜ್ಞಾನಿಯೊಬ್ಬರು ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ಸರ್ಕಾರ ನಡೆಸುತ್ತಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಜತೆಗೆ ಕೋವಾಕ್ಸಿನ್ ಅಭಿವೃದ್ಧಿಪಡಿಸುತ್ತಿರುವ ಖಾಸಗಿ ಕಂಪನಿ ಭಾರತ್ ಬಯೋಟೆಕ್ ಮುಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಲಸಿಕೆ ಬಿಡುಗಡೆ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ.
ಲಸಿಕೆ ಪರಿಣಾಮಕಾರಿ ಫಲಿತಾಂಶ ತೋರಿಸಿದೆ ಎಂದು ಐಸಿಎಂಆರ್ ಹಿರಿಯ ವಿಜ್ಞಾನಿ ಹಾಗೂ ಕೋವಿಡ್ ಕಾರ್ಯಪಡೆಯ ಸದಸ್ಯರೊಬ್ಬರು ಹೇಳಿದ್ದಾರೆ.
ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ಆರಂಭದ ವೇಳೆಗೆ ಏನಾದರೂ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಫೆಬ್ರವರಿಯಲ್ಲಿ ಪ್ರಾರಂಭವಾದರೆ ಕೋವಾಕ್ಸಿನ್ ಭಾರತದಿಂದ ತಯಾರಿಸಿದ ಮೊದಲ ಲಸಿಕೆ ಎಂಬ ಹೆಗ್ಗಳಿಕೆಯಾಗಲಿದೆ.