ಲಂಡನ್: ಕೋವಿಡ್ 19ನ ರೂಪಾಂತಾರ ತಳಿ BA.2.86 ಸೋಂಕು ಅನೇಕ ದೇಶಗಳಲ್ಲಿ ಉಲ್ಬಣಿಸಿದೆ. ಈ ಸೋಂಕು ನಿಯಂತ್ರಣಕ್ಕೆ ಇನ್ನಿಲ್ಲದ ಕ್ರಮವನ್ನು ನಡೆಲಾಗುತ್ತಿದೆ. ಇಂಗ್ಲೆಂಡ್ನಲ್ಲಿ ಕೂಡ ಕೋವಿಡ್ 19ನ ಓಮ್ರಿಕಾನ್ ರೂಪಾಂತರ ಉಲ್ಬಣಿಸಿದ್ದು, ಇದು ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಕ್ಷಣಕ್ಕೆ ಬೂಸ್ಟರ್ ಲಸಿಕೆಯನ್ನು ಪಡೆಯುವಂತೆ ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ಮನವಿ ಮಾಡಿದೆ.
ಇಂಗ್ಲೆಡ್ನಲ್ಲಿ ಹೆಚ್ಚು ರೂಪಾಂತರ ಹೊಂದಿರುವ BA.2.86 ಸೋಂಕಿನ ಪ್ರಮಾಣ ಹೆಚ್ಚಿದ್ದು, ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆ 65 ಮತ್ತು ಅದಕ್ಕಿಂತ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆಯುವಂತೆ ತಿಳಿಸಲಾಗಿದೆ.
ದುರ್ಬಲ ಗುಂಪಿನವರಿಗೆ ಮುಕ್ತವಾಗಿ ಶೀಘ್ರದಲ್ಲೇ ಲಸಿಕೆ ನೀಡಲಿದ್ದಾರೆ. ನೂರಾರು, ಸಾವಿರಾರು ವಯಸ್ಕರು ಚಳಿಗಾಲದ ಲಸಿಕೆಗೆ ಅರ್ಹರಾಗಿದ್ದಾರೆ. ಇದರಲ್ಲಿ 65 ಮತ್ತು ಅದಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಹೊಂದಿರುವವರು ಕೋವಿಡ್ ಲಸಿಕೆ ಪಡೆಯಲು ಎನ್ಎಚ್ಎಸ್ ಪ್ರೋತ್ಸಾಹಿಸಿ, ಆಹ್ವಾನ ನೀಡುತ್ತದೆ ಎಂದು ಎನ್ಎಚ್ಎಸ್ ಹೇಳಿಕೆ ನೀಡಿದೆ.
ವರದಿ ಪ್ರಕಾರ, ಏಪ್ರಿಲ್ ಅಂತ್ಯದ ಬಳಿಕ ಇದೀಗ ಕೋವಿಡ್ನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಕಳೆದ ಚಳಿಗಾಲಕ್ಕೆ ಹೋಲಿಕೆ ಮಾಡಿದರೆ, ಕೋವಿಡ್ ಪ್ರಮಾಣ ಕಡಿಮೆ ಇದೆ. 85 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಹೆಚ್ಚಿದೆ.