ನವದೆಹಲಿ: ದೇಶದಲ್ಲಿ ಕೋವಿಡ್ ರೂಪಾಂತರಿ ತಳಿ ಜೆಎನ್.1 ಪತ್ತೆ ಮತ್ತು ಸೋಂಕು ಪ್ರಕರಣಗಳು ಏರಿಕೆ ಕಂಡಿರುವ ಕುರಿತು ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಸಾಂಕ್ರಾಮಿಕ ರೋಗದ ಕುರಿತು ಸಂಪೂರ್ಣ ಜಾಗೃತಿ ಮತ್ತು ಸಹಕಾರದ ಅಗತ್ಯವನ್ನು ಅವರು ಇದೇ ವೇಳೆ ಒತ್ತಿ ಹೇಳಿದರು.
ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಮಾತನಾಡಿ, ಜೆಎನ್.1 ಎಂಬ ಹೊಸ ತಳಿ ಕೋವಿಡ್ ಪ್ರಕರಣಗಳ ಏರಿಕೆಗೆ ಕಾರಣವಾಗುತ್ತಿದೆ. ಈ ತಳಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಆದರೆ, ಸೋಂಕು ಸೌಮ್ಯ ಲಕ್ಷಣ ಹೊಂದಿದ್ದು, ಗಾಬರಿಪಡುವ ಅಗತ್ಯ ಇಲ್ಲ ಎಂದರು.
ಇತ್ತೀಚಿನ ಮಾಹಿತಿ ಪ್ರಕಾರ, ಹೊಸ ಕೋವಿಡ್ ತಳಿಯು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ. ಪ್ರಸ್ತುತ, ದೇಶಾದ್ಯಂತ 2,300 ಸಕ್ರಿಯ ಪ್ರಕರಣಗಳಿದ್ದು, ಕಳೆದು ಹತ್ತು ದಿನಗಳಿಂದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ 2 ವಾರದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಇವರು ಇತರೆ ಗಂಭೀರ ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು ಎಂದು ತಿಳಿಸಿದರು.