ಹೈದರಾಬಾದ್:ಎದೆಹಾಲುಣಿಸುವ ತಾಯಂದಿರು ಕೋವಿಡ್ -19 ಲಸಿಕೆ ಪಡೆದರೆ, ವ್ಯಾಕ್ಸಿನೇಷನ್ ನಂತರ ಕನಿಷ್ಠ 80 ದಿನಗಳವರೆಗೆ ಎದೆ ಹಾಲಿನ ಮೂಲಕ ತಮ್ಮ ಮಕ್ಕಳಿಗೆ ರಕ್ಷಣಾತ್ಮಕ ಪ್ರತಿಕಾಯಗಳನ್ನು ರವಾನಿಸಬಹುದು ಎಂದು ಅಧ್ಯಯನವೊಂದು ಸೂಚಿಸುತ್ತದೆ.
ವ್ಯಾಕ್ಸಿನ್ ಪಡೆದ ತಾಯಂದಿರ ಎದೆ ಹಾಲಿನಲ್ಲಿ ಐಜಿಎ ಮತ್ತು ಐಜಿಜಿ ಪ್ರತಿಕಾಯಗಳು ಉನ್ನತ ಮಟ್ಟದಲ್ಲಿವೆ ಎಂದು ಅಧ್ಯಯನ ಕಂಡು ಹಿಡಿದಿದೆ. ಇವು ಶಿಶುಗಳಲ್ಲಿನ ಸೋಂಕುಗಳ ವಿರುದ್ಧ ಹೋರಾಡಲು ಪ್ರತಿರಕ್ಷಣಾ ವ್ಯವಸ್ಥೆಯಿಂದ ನಿಯೋಜಿಸಲಾದ ಪ್ರತಿಕಾಯಗಳಾಗಿವೆ.
ಅಮೆರಿಕನ್ ಜರ್ನಲ್ ಆಫ್ ಅಬ್ಸ್ಟೆಟ್ರಿಕ್ಸ್ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಎರಡೂ ಪ್ರತಿಕಾಯಗಳು ವ್ಯಾಕ್ಸಿನ್ನ ಮೊದಲ ಡೋಸ್ ಪಡೆದ 14ರಿಂದ 20 ದಿನಗಳಲ್ಲಿ ಮಹತ್ವದ ಮಟ್ಟವನ್ನು ತಲುಪಿದವು.
"ನಮ್ಮ ಅಧ್ಯಯನವು, ಮೊದಲ ಡೋಸ್ ಪಡೆದ ಎರಡು ವಾರಗಳ ನಂತರ ಎದೆ ಹಾಲಿನಲ್ಲಿರುವ ಕೋವಿಡ್ -19 ವೈರಸ್ ವಿರುದ್ಧದ ಪ್ರತಿಕಾಯಗಳಲ್ಲಿ ಭಾರಿ ಉತ್ತೇಜನವನ್ನು ತೋರಿಸಿದೆ." ಎಂದು ಯುಎಸ್ನ ಸೈಂಟ್ ಲೂಯಿಸ್ನಲ್ಲಿರುವ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿರುವ ಪ್ರಮುಖ ಲೇಖಕ ಕೀನಿ ಕೆಲ್ಲಿ ಹೇಳಿದ್ದಾರೆ.
ಎರಡು ಡೋಸ್ ಫೂಜರ್-ಬಯೋಎನ್ಟೆಕ್ ಕೊರೊನಾ ವೈರಸ್ ಲಸಿಕೆ ಪಡೆದ ತಾಯಂದಿರ ಎದೆ ಹಾಲಿನ ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ತಾಯಂದಿರ ಸ್ತನ್ಯಪಾನ ಮಾಡಿದ ಶಿಶುಗಳಲ್ಲಿ ದೀರ್ಘಕಾಲೀನ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಕೆಲವು ಪುರಾವೆಗಳ ಮೂಲಕ ಸಂಶೋಧಕರು ತಿಳಿಸಿದ್ದಾರೆ.