ಬೆಂಗಳೂರು: ಕೋವಿಡ್ 19 ಸಾಂಕ್ರಾಮಿಕ ಸೋಂಕನ್ನು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯಿಂದ ಕೈ ಬಿಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಘೋಷಿಸಿದೆ. ವಿಶ್ವ ಆರೋಗ್ಯ ಮಂಡಳಿ ಕೂಡ, ಜಗತ್ತಿನಾದ್ಯಂತ ಸರ್ಕಾರ ಕೈಗೊಂಡ ಕ್ರಮಗಳಿಂದ ಸೋಂಕಿನ ದೀರ್ಘಕಾಲಿನ ನಿರ್ವಹಣೆಯತ್ತ ದೃಷ್ಟಿ ಹರಿಸುವುದಾಗಿ ತಿಳಿಸಿದೆ.
2019ರ ಅಂತ್ಯದ ವೇಳೆಗೆ ಮೊದಲ ಬಾರಿಗೆ ಚೀನಾದ ವುಹಾನ್ನಲ್ಲಿ ಈ ಕೋವಿಡ್ 19 ಸೋಂಕು ಪತ್ತೆಯಾಯಿತು. 2020ರ ಜನವರಿಯಲ್ಲಿ ಈ ಪ್ರಕರಣಗಳು ಹೆಚ್ಚಾಯಿತು. ಸೋಂಕಿನ ಸಾಂಕ್ರಾಮಿಕತೆ ಅರಿತ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಿ, ಈ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಿತು. ಕ್ಷೀಪ್ರಗತಿಯಲ್ಲಿ ಹಲವು ದೇಶಗಳಿಗೆ ಹರಡಿದ ಸೋಂಕು ಅನೇಕ ಗಂಭೀರ ಸಮಸ್ಯೆ ಮತ್ತು ಆಸ್ಪತ್ರೆ ದಾಖಲೀಕರಣ ಮತ್ತು ಸಾವಿಗೆ ಕಾರಣವಾಯಿತು. ಜೊತೆಗೆ ವಿಶ್ವದಾದ್ಯಂತ ಆರೋಗ್ಯ ವ್ಯವಸ್ಥೆ ಮೇಲೆ ಗಮನಾರ್ಹ ಒತ್ತಡ ಸೃಷ್ಟಿ ಮಾಡಿತು.
ಮೂರು ಷರತ್ತುಗಳು: ಯಾವುದೇ ಸೋಂಕನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯಂದು ಘೋಷಿಸಲು ಅದಕ್ಕೆ ಮೂರು ಷರತ್ತುಗಳಿರುತ್ತದೆ. ಮೊದಲನೇಯದು, ಸೋಂಕು ಹಲವು ದೇಶಗಳಲ್ಲಿ ಹರಡಬೇಕು. ಎರಡನೇಯದು, ಈ ಸೋಂಕಿನ ಅನೇಕ ಸಮಸ್ಯೆ, ಆಸ್ಪತ್ರೆ ದಾಖಲೀಕರಣ ಮತ್ತು ಸಾವಿನ ವರದಿ. ಮೂರನೇಯದು, ಇದರಿಂದ ಆರೋಗ್ಯ ಕಾಳಜಿ ವ್ಯವಸ್ಥೆ ಮೇಲೆ ಹೆಚ್ಚನ ಒತ್ತಡ. ಈ ಮೂರು ಕಾರಣಗಳಿಂದಾಗಿ ಕೋವಿಡ್ 19 ಅನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಲಾಯಿತು. 2020 ಮತ್ತು 2021ರಲ್ಲಿ ಈ ಸೋಂಕು ಜಗತ್ತನ್ನು ಕಾಡಿತು.
ಕೋವಿಡ್ 19 ಕಾರಣವಾಗು ಸಾರ್ಸ್ ಕೋವ್-2 ನೋವೆಲ್ ವೈರಸ್ ಆಗಿದ್ದು, ಆರಂಭದಲ್ಲಿ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರಲಿಲ್ಲ. ಸಾಂಕ್ರಾಮಿಕತೆ ಮುಂದುವರೆದಂತೆ ವೈದ್ಯರು ಮತ್ತು ಸಂಶೋಧಕರು ಈ ವೈರಸ್ ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾಮ ಬೀರುವುದನ್ನು ಗುರಿತಿಸಿದರು. ಇದು ಒಂದು ರೀತಿಯ ಸೈಟೊಕಿನ್ ಚಂಡಮಾರುತಕ್ಕೆ ಕಾರಣವಾಗುತ್ತದೆ. ಇದು ಹೆಚ್ಚಾಗಿ ಹಿರಿಯ ನಾಗರಿಕರು ಮತ್ತು ಮದುಮೇಹದಂತಹ ದೀರ್ಘಕಾಲಿನ ಆರೋಗ್ಯ ಸಮಸ್ಯೆ ಇದ್ದವರಲ್ಲಿ ಹೆಚ್ಚಿನ ಪರಿಣಾಮ ಉಂಟು ಮಾಡಿತು.
ಕಳೆದ ಮೂರು ವರ್ಷದಲ್ಲಿ ವೈದ್ಯರು ಮತ್ತು ಸಂಶೋಧಕರು, ಅಪಾಯದ ಅಂಶ, ರೋಗ ಪತ್ತೆ, ಚಿಕಿತ್ಸೆಯ ಪ್ರೊಟೊಕಾಲ್, ತಡೆಯುವ ವಿಧಾನ ಸೇರಿದಂತೆ ಈ ಕೋವಿಡ್ 19ನಿಂದ ಸಾಕಷ್ಟು ಕಲಿತರು. ವಿಶ್ವಾದ್ಯಂತ ಸರ್ಕಾರಗಳು ಕೂಡ ಆರೋಗ್ಯ ವ್ಯವಸ್ಥೆ ಬಲಿಪಡಿಸಿದೆ. ಲಸಿಕೀಕರಣಗಳನ್ನು ತಂದಿದ್ದು, ಭಾರತದಲ್ಲಿ ಶೇ 90ರಷ್ಟು ಹೆಚ್ಚು ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ.
ಭಾರತದಲ್ಲಿ ಕೋವಿಡ್: ಕೋವಿಡ್ 19 ನಿಂದಾಗಿ ಭಾರತದಲ್ಲಿ 4.43 ಕೋಟಿ ಪ್ರಕರಣಗಳು ವರದಿಯಾಗಿದ್ದು, 5.3 ಲಕ್ಷ ಜನರು ಸಾವನ್ನಪ್ಪಿದ ವರದಿ ಆಗಿದೆ. ಜಾಗತಿಕವಾಗಿ 76.5 ಕೀಟಿ ಜನರು ಈ ಸೋಂಕಿಗೆ ತುತ್ತಾಗಿದ್ದು, 69.2 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಇದೀಗ ಸೋಂಕಿನ ಪ್ರಭಾವ ಕಡಿಮೆ ಆಗಿದ್ದು, ಆರೋಗ್ಯ ವ್ಯವಸ್ಥೆಗಳು ಒತ್ತಡಕ್ಕೆ ಒಳಗಾಗಿಲ್ಲ.