ಲಂಡನ್ : ಮನುಷ್ಯರಿಗೆ ಹರಡಬಹುದಾದ ಕೊರೊನಾವೈರಸ್‌ಗಳು ಯುಕೆಯ ಬಾವಲಿಗಳಲ್ಲಿ ಕಂಡು ಬಂದಿವೆ ಎಂದು ಸಂಶೋಧಕರ ತಂಡವೊಂದು ಹೇಳಿದೆ. ವೈರಸ್‌ಗಳ ಬಗ್ಗೆ ನಿಯಮಿತವಾಗಿ ಆನುವಂಶಿಕ ಸಮೀಕ್ಷೆಗಳನ್ನು (genetic surveys) ನಡೆಸುವುದು ಅಗತ್ಯ ಎಂಬುದು ಈ ಸಂಶೋಧನೆಯಿಂದ ಖಾತರಿಯಾಗಿದೆ. ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ ನೇತೃತ್ವದ ತಂಡವು 16 ಯುಕೆ ಬಾವಲಿಗಳ ಜಾತಿಗಳ ಮಲ ಮಾದರಿಗಳನ್ನು ಕೊರೊನಾವೈರಸ್ಗಾಗಿ ಪರೀಕ್ಷಿಸಿದೆ.
ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಫಲಿತಾಂಶಗಳ ವರದಿಯ ಪ್ರಕಾರ, ಮಾದರಿಯ 16 ಜಾತಿಗಳಲ್ಲಿ ಎರಡು ಹೊಸಬಗೆಯವು ಆಗಿದ್ದು, ಇವು ಸೇರಿದಂತೆ ನಾಲ್ಕು ಜಾತಿಯ ಕೊರೊನಾವೈಸರ್ಗಳ ಪ್ರಸರಣ ಕಂಡು ಬಂದಿದೆ. ತಂಡವು ಎರಡು ಜಾತಿಯ ಆಲ್ಫಾ ಕೊರೊನಾವೈರಸ್ಗಳನ್ನು ಗುರುತಿಸಿದೆ. ಒಂದು ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (MERS)-ಸಂಬಂಧಿತ ಕೊರೊನಾವೈರಸ್ ಮತ್ತು ಇನ್ನೊಂದು ಸಾರ್ಬೆಕೊವೈರಸ್ ಆಗಿವೆ. ಕೋವಿಡ್-19 ಗೆ ಕಾರಣವಾಗುವ SARS-CoV-2 ವೈರಸ್ ಕೂಡ ಸಾರ್ಬೆಕೊವೈರಸ್ ಆಗಿದೆ.
ಆದಾಗ್ಯೂ, ಪ್ರಸ್ತುತ ಈ ವೈರಸ್‌ಗಳು ಯಾವುದೇ ವ್ಯಕ್ತಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಬಾವಲಿಗಳು ಯುಕೆಯಲ್ಲಿ ಸಂರಕ್ಷಿತ ಜಾತಿಗಳಾಗಿವೆ. ಆದ್ದರಿಂದ ಸಂರಕ್ಷಣಾ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು ಈ ಪ್ರಯತ್ನಕ್ಕೆ ನಿರ್ಣಾಯಕವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಪ್ರಪಂಚದ ಅನೇಕ ಭಾಗಗಳಲ್ಲಿ, ಮಾನವರು ಮತ್ತು ಸಾಕುಪ್ರಾಣಿಗಳಲ್ಲಿ ಹರಡುವ ರೋಗಕಾರಕಗಳ ಬಗ್ಗೆ ನಾವು ಸೂಕ್ತ ಕಣ್ಗಾವಲು ಹೊಂದಿದ್ದೇವೆ. ಆದರೆ ವನ್ಯಜೀವಿಗಳಲ್ಲಿ ಈ ರೀತಿಯ ಕಣ್ಗಾವಲು ಇಲ್ಲ ಎಂದು ಯುಸಿಎಲ್ ಜೆನೆಟಿಕ್ಸ್ ಇನ್ಸ್ಟಿಟ್ಯೂಟ್ನ ನಿರ್ದೇಶಕರಾದ ಸಹ-ಲೇಖಕ ಪ್ರೊಫೆಸರ್ ಫ್ರಾಂಕೋಯಿಸ್ ಬಲೂಕ್ಸ್ ಹೇಳಿದರು. ಹೆಚ್ಚಿದ ಕಣ್ಗಾವಲು ಸಾರ್ವಜನಿಕ ಆರೋಗ್ಯ ಸನ್ನದ್ಧತೆ ಮತ್ತು ಆಹಾರ ಭದ್ರತೆಯನ್ನು ಸುಧಾರಿಸಬೇಕು ಮತ್ತು ಇದು ಜೀವವೈವಿಧ್ಯ ಸಂರಕ್ಷಣೆಗೆ ಸಹ ಪ್ರಯೋಜನಕಾರಿಯಾಗಿದೆ ಎಂದು ಅವರು ತಿಳಿಸಿದರು.