ಕೋವಿಡ್ 19 ಮತ್ತು ಅದರ ಪ್ರತಿರಕ್ಷಣಾ ಲಸಿಕೆಗಳು ಮೈಗ್ರೇನ್ (ತೀವ್ರ ಸ್ವರೂಪದ ತಲೆನೋವು) ತೀವ್ರತೆಯ ಮೇಲೆ ಕೊಂಚವಾದರೂ ಪರಿಣಾಮ ಬೀರಿದೆ ಎಂದು ಹೊಸ ಅಧ್ಯಯನ ಹೇಳಿದೆ. ಈ ಕುರಿತ ಸಂಶೋಧನಾತ್ಮಕ ವರದಿಯನ್ನು ಯುರೋಪಿಯನ್ ಜರ್ನಲ್ ಆಫ್ ನ್ಯೋರೋಲಾಜಿಯಲ್ಲಿ ಪ್ರಕಟಿಸಲಾಗಿದೆ.
ಸ್ಪಾನಿಷ್ ತಲೆನೋವಿನ ಕ್ಲಿನಿಕ್ನಲ್ಲಿ 550 ಮಂದಿ ವಯಸ್ಕರು ಮೈಗ್ರೇನ್ ಸಂಬಂಧಿತ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಶೇ 44.7ರಷ್ಟು ಮಂದಿಗೆ ಒಮ್ಮೆಯಾದರೂ ಕೋವಿಡ್ ಸೋಂಕು ತಗುಲಿದೆ. ಶೇ 83.3ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಕೋವಿಡ್ ಬಳಿಕ ತಮ್ಮ ಮೈಗ್ರೇನ್ ಮತ್ತಷ್ಟು ಹೆಚ್ಚಾಯಿತು ಎಂದು ಶೇ 24.7ರಷ್ಟು ಮಂದಿ ತಿಳಿಸಿದರೆ, ಶೇ 11.4 ಮಂದಿ ಲಸಿಕೆ ಪಡೆದ ನಂತರ ಮೈಗ್ರೇನ್ ಪರಿಣಾಮ ಉಲ್ಬಣಿಸಿತು ಎಂದಿದ್ದಾರೆ.
ಅಧ್ಯಯನದಲ್ಲಿ ಭಾಗಿಯಾದ ಶೇ 2.5ರಷ್ಟು ಮಂದಿ ಮೈಗ್ರೇನ್ ಹದಗೆಡುತ್ತಿರುವ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಇನ್ನು ಲಸಿಕೆ ಪಡೆದ ಶೇ 17.3ರಷ್ಟು ಜನರು ಮೈಗ್ರೇನ್ ಹದಗೆಡುತ್ತಿರುವ ಬಗ್ಗೆ ಕಾಳಜಿವಹಿಸಿದ್ದಾರೆ. ಸಂಶೋಧಕರು ಇ-ಡೈರಿಯನ್ನು ಪರಿಶೀಲಿಸಿದಾಗ ತಲೆನೋವಿನ ಫ್ರಿಕ್ವೆನ್ಸಿಯಲ್ಲಿ ಮಹತ್ತರ ವ್ಯತ್ಯಾಸ ಕಂಡುಕೊಂಡಿದ್ದಾರೆ. ಸೋಂಕು ಅಥವಾ ಲಸಿಕೆ ಪಡೆಯುವ ಒಂದು ತಿಂಗಳು ಮೊದಲು ಮತ್ತು ನಂತರದಲ್ಲಿ ಬೇರೆ ರೋಗಿಗಳಿಗೆ ಹೋಲಿಸಿದ್ದು, ಈ ರೋಗಿಗಳ ಮೈಗ್ರೇನ್ ಹದಗೆಟ್ಟಿರುವುದು ಗೊತ್ತಾಗಿದೆ.