ಉತ್ತಮ ಆರೋಗ್ಯ ಹಾಗೂ ಚರ್ಮದ ರಕ್ಷಣೆಗಾಗಿ ಮೀನಿನ ಎಣ್ಣೆಯನ್ನು ಬಳಸುತ್ತಾರೆ. ಈ ಎಣ್ಣೆ ಆರೋಗ್ಯವೃದ್ಧಿಗೂ ಸಹಾಯ ಮಾಡುತ್ತದೆ.
ಮೀನಿನ ಎಣ್ಣೆ ಒಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿರುತ್ತದೆ. ಟ್ರೈಗ್ಲಿಸರೈಡ್ ಅನ್ನು ಕರಗಿಸಲು ಇದು ಸಹಾಯ ಮಾಡುವುದು. ರಕ್ತದಲ್ಲಿನ ಕೊಬ್ಬು, ರಕ್ತ ಸಂಚಾರ, ಹೃದಯದ ಆರೋಗ್ಯ ಸೇರಿದಂತೆ ವಿವಿಧ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಕೂಡಾ ಸಹಕಾರಿ.
ಮೀನಿನ ಎಣ್ಣೆ ಅಥವಾ ಕಾಡ್ ಲಿವರ್ ಎಣ್ಣೆಯಿಂದ ಹಲವಾರು ಔಷಧೀಯ ಪ್ರಯೋಜನಗಳನ್ನು ಪಡೆಯಬಹುದು. ಅನೇಕ ರೋಗಗಳಿಂದ ರಕ್ಷಣೆ ಪಡೆಯಲು ಇದು ಸಹಕಾರಿಯೂ ಹೌದು. ಕಣ್ಣು, ಮೂಳೆ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಇದರ ಪ್ರಯೋಜನಗಳನ್ನು ಪಡೆಯಲು ಸಾಮಾನ್ಯ ಮೀನಿನ ಎಣ್ಣೆಯನ್ನು ಸೇವಿಸುವ ಅಗತ್ಯವಿಲ್ಲ. ಇದು ಸಪ್ಲಿಮೆಂಟ್ಸ್ ಅಥವಾ ಕ್ಯಾಪ್ಸುಲ್‌ಗಳ ರೂಪದಲ್ಲಿಯೂ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ.
ಮೀನಿನ ಎಣ್ಣೆಯಲ್ಲಿ ಕಂಡುಬರುವ ಪೋಷಕಾಂಶಗಳು:
ಮುಂಬೈ ಮೂಲದ ಪೌಷ್ಟಿಕ ತಜ್ಞ ಡಾ. ದಿಲ್ಶನ್ ಬಾಬಾ ಅವರು ಮೀನಿನ ಎಣ್ಣೆ ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಎ ಮತ್ತು ಡಿಗಳ ಪ್ರಮುಖ ಮೂಲಗಳಲ್ಲಿ ಒಂದಾಗಿದೆ ಎಂದು ವಿವರಿಸುತ್ತಾರೆ. ಈ ಎಣ್ಣೆಯು ಒಮೆಗಾ-3 ಕೊಬ್ಬಿನಾಮ್ಲಗಳ ಜೊತೆಗೆ ಐಕೋಸಾಪೆಂಟೆನೊಯಿಕ್ ಆಮ್ಲ (ಇಪಿಎ) ಮತ್ತು ಡೊಕೊಸಾಹೆಕ್ಸೆನೊಯಿಕ್ ಆಮ್ಲ (ಡಿಎಚ್‌ಎ) ಹೊಂದಿರುತ್ತದೆ. ಮೀನಿನಿಂದ ಸಿಗುವ ಒಮೆಗಾ-3 ಕೊಬ್ಬಿನಾಮ್ಲಗಳು ಸಸ್ಯಗಳಿಂದ ಪಡೆಯುವುದಕ್ಕಿಂತ ಹೆಚ್ಚು ಉತ್ತಮವೆಂದು ಹೇಳಿದ್ದಾರೆ.
ಸಸ್ಯಗಳಲ್ಲಿನ ಒಮೆಗಾ -3 ಮುಖ್ಯವಾಗಿ ಆಲ್ಫಾ-ಲಿನೋಲೆನಿಕ್ ಆಮ್ಲದ (ಎಎಲ್‌ಎ) ರೂಪದಲ್ಲಿ ಕಂಡುಬರುತ್ತದೆ. ಇದು ಕೂಡ ಬಹಳ ಮುಖ್ಯವಾಗಿದ್ದರೂ ಇದಕ್ಕಿಂತ ಐಕೋಸಾಪೆಂಟೆನೊಯಿಕ್ ಆಮ್ಲ ಮತ್ತು ಡೊಕೊಸಾಹೆಕ್ಸೆನೊಯಿಕ್ ಹೆಚ್ಚು ಪರಿಣಾಮಕಾರಿ. ಇದಲ್ಲದೆ, ಮೀನಿನ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದು ಚರ್ಮವನ್ನು ರಕ್ಷಿಸುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಸರಿಯಾಗಿ ಮಾಡುತ್ತದೆ.
ಈ ಎಣ್ಣೆಯಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಹೃದಯದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಟ್ರೈಗ್ಲಿಸರೈಡ್ ಅಂದರೆ ಲಿಪಿಡ್ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ, ಹಾನಿಕಾರಕ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (ಎಲ್‌ಡಿಎಲ್) ಕಡಿಮೆ ಮಾಡುವ ಮೂಲಕ ಉತ್ತಮ ಕೊಲೆಸ್ಟ್ರಾಲ್, ಅಂದರೆ ಹೈ-ಡೆನ್ಸಿಟಿ ಲಿಪೊಪ್ರೋಟೀನ್ (ಹೆಚ್‌ಡಿಎಲ್) ಮಟ್ಟವನ್ನು ಹೆಚ್ಚಿಸುತ್ತದೆ.
ಒಮೆಗಾ -3 ದೇಹದಲ್ಲಿ ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ. ಅಪಧಮನಿಕಾಠಿಣ್ಯದ ರಚನೆಯನ್ನು ಕಡಿಮೆ ಮಾಡುತ್ತದೆ. ಇದು ಅಂತಿಮವಾಗಿ ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡಬಲ್ಲದು.
ಮೀನಿನ ಎಣ್ಣೆಯ ಸೇವನೆಯು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಉಪಕಾರಿ. ಇದು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುವ ಜೊತೆಗೆ ಆಸ್ಟಿಯೊಪೊರೋಸಿಸ್ ಸಮಸ್ಯೆಯನ್ನು ನಿಭಾಯಿಸಲು ಸಹಾಯಕ. ಇದಲ್ಲದೆ, ಒಮೆಗಾ -3 ಕೊಬ್ಬಿನಾಮ್ಲಗಳು ಮೂಳೆಗಳು ಮತ್ತು ಅವುಗಳ ಸುತ್ತಲಿನ ಅಂಗಾಂಶಗಳಲ್ಲಿ ಇರುವ ಖನಿಜಗಳ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಹಾಗೂ ಸಂಧಿವಾತದ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.
ಒತ್ತಡ, ಖಿನ್ನತೆ ಕಡಿಮೆ ಮಾಡಲು ಉಪಕಾರಿ: