ಬೆಂಗಳೂರು: ಮಳೆಗಾಲದಲ್ಲಿ ಜ್ವರ, ಡೆಂಗ್ಯೂ ಸೇರಿದಂತೆ ಕಣ್ಣಿನ ಸೋಂಕಿನ ಸಮಸ್ಯೆ ಕೂಡ ಹೆಚ್ಚು. ಭಾರಿ ಮಳೆ ಮತ್ತು ಪ್ರವಾಹ ವಾತಾವರಣಗಳು ಇದಕ್ಕೆ ಪ್ರಮುಖ ಕಾರಣಗಳು. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನುಕೂಲವಾಗುವ ಪರಿಸ್ಥಿತಿ, ಹವಾಮಾನ ಬದಲಾವಣೆ ಮತ್ತು ಪ್ರವಾಹ, ಕಲುಷಿತ ವಾತಾವರಣದಿಂದ ಅನೈರ್ಮಲ್ಯ ಪರಿಸ್ಥಿತಿ ಉಂಟಾಗಿ ಕಣ್ಣಿನ ಸೋಂಕು ಹೆಚ್ಚುತ್ತದೆ.
ರಸ್ತೆಯಲ್ಲಿ ಮಳೆಯ ಕೊಳಚೆ ನೀರುಗಳ ಮೇಲೆ ವಾಹನಗಳು ಸವಾರಿ ಮಾಡಿದಾಗ ಅದರಿಂದ ಮೈಕ್ರೋಡ್ರಾಪ್ಸ್ ಮೂಲಕ ಸೋಂಕುಗಳು ಪರಿಸರದಲ್ಲಿ ಹರಡುವುದರಿಂದ ಅದೂ ಕೂಡ ಕಣ್ಣಿನ ಸಮಸ್ಯೆ ತಂದಿಡುತ್ತದೆ. ಇದರಿಂದ ಕಣ್ಣಿನ ಊತ, ಕೆರೆತ, ನೀರು ಬರುವಿಕೆ, ಪಿಸುರು, ಕಣ್ಣು ರೆಪ್ಪೆ ಊದಿಕೊಳ್ಳುವುದು, ಕೆಂಪಾಗುವುದು ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರ ಭೇಟಿ ಅವಶ್ಯಕ.
ಪ್ರವಾಹ, ಅಧಿಕ ಮಳೆಯಲ್ಲಿ ಅನೇಕ ಬಾರಿ ಮಕ್ಕಳು ಕೊಳಚೆ ನೀರು ಮುಟ್ಟಿ ಕಣ್ಣೊರೆಸಿಕೊಳ್ಳುತ್ತಾರೆ. ಅನೇಕ ಬಾರಿ ಶುಚಿತ್ವವನ್ನು ನಿರ್ವಹಣೆ ಮಾಡುವುದು ಕೂಡ ಸವಾಲೇ. ಇದರ ಹೊರತಾಗಿ ಮಾನ್ಸೂನ್ನಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳೆಯುವ ಪ್ರಮಾಣ ಜಾಸ್ತಿಯಾಗಿದ್ದು, ಸೋಂಕು ತಗಲುತ್ತದೆ.
ಕಾಂಜೆಕ್ಟಿವಿಟಿ/ ಗುಲಾಬಿ ಕಣ್ಣು: ಕಣ್ಣಿನ ಬಿಳಿ ಕೆಂಪಾಗುವುದು, ಉರಿ ಅಥವಾ ನೋವು, ಕಣ್ಣಿನಲ್ಲಿ ನಿರಂತರ ನೀರು ಹೊರಬರುವುದು,ಕಣ್ಣು ಊದಿಕೊಳ್ಳುವುದು ಗುಲಾಬಿ ಕಣ್ಣಿನ ಲಕ್ಷಣಗಳು. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಎಲ್ಲಾ ವಯಸ್ಸಿನವರಲ್ಲೂ ಕಂಡು ಬರುತ್ತಿದೆ. ಜೊತೆಗೆ, ಪ್ರದೂಷಣೆಯೂ ಕೂಡ ನಿಮ್ಮ ಕಣ್ಣಿನಲ್ಲಿ ಸೋಂಕು ಮೂಡಲು ಕಾರಣವಾಗಬಹುದು. ಹೀಗಾಗಿ ಸಾಧ್ಯವಾದಷ್ಟು ಕಣ್ಣೀನ ರಕ್ಷಣೆಗೆ ಆದ್ಯತೆ ನೀಡಿ
ಸ್ಟೈ: ಕಣ್ಣಿನ ರೆಪ್ಪೆ ಬುಡದಲ್ಲಿ ಸಣ್ಣ ಗ್ರಂಥಿಗಳಲ್ಲಿ ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಳ್ಳುತ್ತದೆ. ಮದ್ರಾಸ್ ಕಣ್ಣಿನಂತೆ ಊತ ಸಂಭವಿಸುತ್ತದೆ. ಭರಿಸಲಾಗದ ನೋವು, ಊತ ಉಂಟಾಗುತ್ತದೆ.