ಬೀಜಿಂಗ್: ಚೀನಾದ ಮಕ್ಕಳಲ್ಲಿ ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ತೀವ್ರ ಉಸಿರಾಟ ತೊಂದರೆಗೆ ಕಾರಣವಾಗುವ ರೋಗಕಾರಕಗಳು ಉಲ್ಬಣವಾಗುತ್ತಿವೆ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ದೇಶದ ಬಹುತೇಕ ಆಸ್ಪತ್ರೆಗಳ ಮಕ್ಕಳ ವಿಭಾಗಗಳು ರೋಗಿಗಳಿಂದ ತುಂಬಿದೆ ಎಂದು ವರದಿಯಾಗಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯುಕ್ತರ ವಕ್ತಾರ ಮಿ ಫೆಂಗ್ ಮಾತನಾಡುತ್ತಾ, ಇನ್ಫುಯೆನ್ಸ ಜೊತೆಗೆ ರೈನೋವೈರಸ್‌ಗಳು, ಮೈಕೋಪ್ಲಾಸ್ಮಾ ನ್ಯುಮೋನಿಯಾ, ರೆಸ್ಪಿರೆಟರಿ ಸಿನ್ಸಿಟಿಯಲ್ ವೈರಸ್ ಮತ್ತು ಅಡೆನೊವೈರಸ್‌ಗಳಿಂದಾಗಿ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಇದೇ ವೇಳೆ ಮಕ್ಕಳ ಮತ್ತು ಜ್ವರ ಹೊರರೋಗಿ ಸೇವೆಗಳ ಬೇಡಿಕೆ ಹಿನ್ನೆಲೆೆಯಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸುವ ಮತ್ತು ಶಾಲೆಗಳಲ್ಲಿ ಸಮಸ್ಯೆಗಳ ತಡೆಗೆ ಕ್ರಮ ಸೇರಿದಂತೆ ಸಕಾಲಿಕ ಮತ್ತು ನವೀಕೃತ ಮಾಹಿತಿ ನೀಡುವಂತೆ ಒತ್ತಾಯಿಸಲಾಗುತ್ತಿದೆ. ರೋಗಗಳ ತಡೆಗಟ್ಟುವಿಕೆಗೆ ಪರಿಣಾಮಕಾರಿ ಪ್ರಯತ್ನ ನಡೆಸಬೇಕು. ಪ್ರಮುಖ ಸ್ಥಳಗಳು ಮತ್ತು ಜನಸಂಖ್ಯೆ ಅಧಿಕವಿರುವ ಸ್ಥಳಗಳಾದ ಶಾಲೆ, ಚೈಲ್ಡ್ಕೇರ್ ಸಂಸ್ಥೆ, ನರ್ಸಿಂಗ್ ಹೋಮ್ನಲ್ಲಿ ನಿಯಂತ್ರಣ ಮಾದರಿಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.