ನವದೆಹಲಿ:ಟೊಮೇಟೊ ಜ್ವರಕ್ಕೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ಔಷಧಿಗಳಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಒತ್ತಿ ಒತ್ತಿ ಹೇಳಿದೆ. ಆದರೆ ಇದೇ ವೇಳೆ, ತಡೆಗಟ್ಟುವ ಕ್ರಮಗಳನ್ನು ಅನುಸರಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ದೇಶದಲ್ಲಿ ಇದುವರೆಗೂ 82 ಮಕ್ಕಳಲ್ಲಿ ಪ್ರಕರಣಗಳು ಕಂಡು ಬಂದಿದೆ ಎಂದು ವರದಿಯಾಗಿದೆ.
ಕೈ, ಕಾಲು ಮತ್ತು ಬಾಯಿ ಕಾಯಿಲೆಯ ಎಚ್‌ಎಫ್‌ಎಂಡಿ ರೂಪಾಂತರದಂತೆ ತೋರುವ ರೋಗವು ಮುಖ್ಯವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ. ಆದರೆ, ಇದು ವಯಸ್ಕರಲ್ಲಿಯೂ ಕಾಣಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ನೀಡಿರುವ ಮಾರ್ಗದರ್ಶಿಯಲ್ಲಿ ಸಲಹೆಯಲ್ಲಿ ತಿಳಿಸಿದೆ. ರೋಗದ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಟೊಮೇಟೊ ವೈರಸ್ ಇತರ ವೈರಲ್ ಸೋಂಕುಗಳ (ಜ್ವರ, ಆಯಾಸ, ಮೈ-ಕೈ ನೋವು ಮತ್ತು ಚರ್ಮದ ಮೇಲೆ ದದ್ದುಗಳು) ರೋಗಲಕ್ಷಣಗಳನ್ನು ತೋರಿಸಿದರೂ ವೈರಸ್ SARS-CoV-2, ಮಂಕಿಪಾಕ್ಸ್, ಡೆಂಘೀ ಮತ್ತು/ಅಥವಾ ಚಿಕೂನ್‌ಗುನ್ಯಾಗೆ ಸಂಬಂಧಿಸಿದ್ದಲ್ಲ ಎಂದು ಕೇಂದ್ರದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ವಾಸ್ತವವಾಗಿ, ಇತ್ತೀಚಿನ ವರದಿಗಳು ಇದು ಎಂಟ್ರೊವೈರಸ್‌ಗಳ ಗುಂಪಿಗೆ ಸೇರಿದ ಕಾಕ್ಸ್‌ಸಾಕಿ ಎ 17 ಎಂದು ಗುರುತಿಸಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಕೇಂದ್ರದ ಆರೋಗ್ಯ ಇಲಾಖೆ ಹೇಳಿದೆ.
ಮೊದಲು ಕಂಡು ಬಂದಿದ್ದು ಎಲ್ಲಿ?:ಈ ವರ್ಷ ಮೇ 6 ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಟೊಮೇಟೊ ಜ್ವರದ ಮೊದಲ ಪ್ರಕರಣ ವರದಿಯಾಗಿತ್ತು. ಜುಲೈ 26 ರ ಹೊತ್ತಿಗೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 82 ಕ್ಕೂ ಹೆಚ್ಚು ಮಕ್ಕಳನ್ನು ವ್ಯಾಪಿಸಿದೆ. ಕೇರಳದ ಇತರ ಪೀಡಿತ ಪ್ರದೇಶಗಳಾದ ಆಂಚಲ್, ಆರ್ಯಂಕವು ಮತ್ತು ನೆಡುವತ್ತೂರ್ಗೆ ವ್ಯಾಪಿಸಿದೆ. ಈ ಸ್ಥಳೀಯ ವೈರಲ್ ಕಾಯಿಲೆಯು ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಇನ್ನು ಭುವನೇಶ್ವರದಲ್ಲಿರುವ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರವು, ಒಡಿಶಾದಲ್ಲಿ 26 ಮಕ್ಕಳು (ಒಂದು ವರ್ಷದಿಂದ ಒಂಬತ್ತು ವರ್ಷ ವಯಸ್ಸಿನವರು) ಟೊಮೇಟೋ ವೈರಸ್ನಿಂದ ಬಳಲುತ್ತಿದ್ದಾರೆ ಎಂದು ಹೊಂದಿದ್ದಾರೆಂದು ವರದಿ ಮಾಡಿದೆ. ಕೇರಳ, ತಮಿಳುನಾಡು, ಹರಿಯಾಣ ಮತ್ತು ಒಡಿಶಾ ಹೊರತುಪಡಿಸಿ ಭಾರತದ ಯಾವುದೇ ಪ್ರದೇಶದಲ್ಲಿ ಈ ರೋಗ ವರದಿಯಾಗಿಲ್ಲ.
ಈ ಹೆಸರು ಬಂದಿದ್ದು ಹೇಗೆ?:ಟೊಮೇಟೊ ಜ್ವರ ವೈರಲ್ ಕಾಯಿಲೆಯಾಗಿದ್ದು, ಅದರ ಮುಖ್ಯ ರೋಗಲಕ್ಷಣದಿಂದಾಗಿ ಈ ಹೆಸರು ಪಡೆದುಕೊಂಡಿದೆ. ದೇಹದ ಹಲವಾರು ಭಾಗಗಳಲ್ಲಿ ಟೊಮೇಟೊ ಆಕಾರದ ಗುಳ್ಳೆಗಳು ಕಾಣಿಸುವುದರಿಂದ ಈ ಹೆಸರು ಚಾಲ್ತಿಯಲ್ಲಿದೆ. ಇದು ಸ್ವಯಂ-ಸೀಮಿತಗೊಳಿಸುವ ಕಾಯಿಲೆಯಾಗಿದೆ. ಏಕೆಂದರೆ ಕೆಲವು ದಿನಗಳ ನಂತರ ಚಿಹ್ನೆಗಳು ಮತ್ತು ರೋಗಲಕ್ಷಣಗಳು ತನ್ನಿಂದ ತಾನೆ ಪರಿಹಾರ ಕಾಣುತ್ತವೆ. ಕೆಂಪು ಬಣ್ಣದ ಸಣ್ಣ ಗುಳ್ಳೆಗಳಾಗಿ ಪ್ರಾರಂಭವಾಗುತ್ತವೆ ಮತ್ತು ಅವು ದೊಡ್ಡದಾಗುವಾಗ ಟೊಮೇಟೊ ಆಕರಾ ಹೋಲುತ್ತವೆ ಎನ್ನುತ್ತಾರೆ ತಜ್ಞರು.
ಟೊಮೇಟೊ ಜ್ವರದ ಲಕ್ಷಣಗಳೇನು?ಟೊಮೇಟೊ ಜ್ವರ ಹೊಂದಿರುವ ಮಕ್ಕಳಲ್ಲಿ ಕಂಡು ಬರುವ ಪ್ರಾಥಮಿಕ ರೋಗಲಕ್ಷಣಗಳು ಇತರ ವೈರಲ್ ಸೋಂಕುಗಳಂತೆಯೇ ಇರುತ್ತವೆ, ಇದರಲ್ಲಿ ಜ್ವರ, ದದ್ದುಗಳು ಮತ್ತು ಕೀಲುಗಳಲ್ಲಿನ ನೋವು ಸೇರಿವೆ. ಆಯಾಸ, ವಾಕರಿಕೆ, ವಾಂತಿ, ಅತಿಸಾರ, ಜ್ವರ, ನಿರ್ಜಲೀಕರಣ, ಕೀಲುಗಳ ಊತ, ದೇಹದ ನೋವು ಮತ್ತು ಸಾಮಾನ್ಯ ಇನ್ಫ್ಲುಯೆನ್ಸ ತರಹದ ರೋಗಲಕ್ಷಣಗಳನ್ನೂ ಸಹ ಒಳಗೊಂಡಿರುತ್ತದೆ. ಇದು ಸೌಮ್ಯವಾದ ಜ್ವರ, ಹಸಿವು, ಅಸ್ವಸ್ಥತೆ ಮತ್ತು ಆಗಾಗ್ಗೆ ಗಂಟಲಿನಿಂದ ನೋವು ಕಾಣಿಸಿಕೊಳ್ಳುತ್ತದೆ.
ಜ್ವರ ಪ್ರಾರಂಭವಾದ ಒಂದು ಅಥವಾ ಎರಡು ದಿನಗಳ ನಂತರ, ಸಣ್ಣ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತವೆ, ಅದು ಗುಳ್ಳೆಗಳಾಗಿ ಮತ್ತು ನಂತರ ಹುಣ್ಣುಗಳಾಗಿ ಬದಲಾಗುತ್ತದೆ. ಹುಣ್ಣುಗಳು ಸಾಮಾನ್ಯವಾಗಿ ನಾಲಿಗೆ, ಒಸಡುಗಳು, ಕೆನ್ನೆಗಳ ಒಳಗೆ, ಅಂಗೈ ಮತ್ತು ಅಡಿಭಾಗದ ಮೇಲೆ ಇರುತ್ತವೆ.