ನವದೆಹಲಿ: ಮಾರ್ಚ್ ಆರಂಭವಾಗುತ್ತಿದ್ದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ನಿಧಾನವಾಗಿ ಬಿಸಿಲಿನ ತಾಪ ಏರ ತೊಡಗಿದೆ. ಚಳಿಯಿಂದ ನಡುಗುತ್ತಿದ್ದ ರಾಜ್ಯಗಳಲ್ಲೂ ಇದೀಗ ಸೂರ್ಯ ಸುಡಲಾರಂಭಿಸಿದ್ದಾನೆ. ಏಪ್ರಿಲ್, ಮೇ ಹೊತ್ತಿಗೆ ಈ ತಾಪಮಾನ ಬಹಳಷ್ಟು ಏರಿಕೆಯಾಗಲಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈ ಸುಡು ಬಿಸಿಲಿನಿಂದ ಜನರು ತತ್ತರಿಸಲಿದ್ದು, ಬಿಸಿಲಿನ ಬೆಗೆಯಿಂದ ಸಾವನ್ನಪ್ಪಿರುವ ವರದಿಗಳು ನಮ್ಮ ಮುಂದೆ ಇದೆ. ಈ ಹಿನ್ನೆಲೆಯಲ್ಲಿ ಬಿಸಿಲಿನ ತಾಪದಿಂದ ಅನಾರೋಗ್ಯಕ್ಕೆ ತುತ್ತಾಗುವ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಕುರಿತಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದೆ.
ರಾಷ್ಟ್ರೀಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ಅಡಿ ಬರುವ ಎಲ್ಲ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಬಿಸಿಲಿನ ಸಂಬಂಧಿತ ಕಾಯಿಲೆ ಬಗ್ಗೆ ಕಣ್ಗಾವಲು ಇಡಲು ಮಾರ್ಚ್ 1ರಿಂದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯನ್ನು ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ರವಾನಿಸಿದ್ದಾರೆ. ಪಿ ಫಾರ್ಮ್ ಮಟ್ಟದ ಲಾಗಿನ್ ಮಾಹಿತಿಯನ್ನು ಬಳಸಿಕೊಂಡು ಎಲ್ಲಾ ಆರೋಗ್ಯ ಸೌಲಭ್ಯಗಳು ಭಾಗವಹಿಸುವಂತೆ ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಜೊತೆಗೆ ನಿಗದಿತ ಸ್ವರೂಪಗಳ ಪ್ರಕಾರ ಪ್ರಕರಣಗಳು ಮತ್ತು ಇತರ ಪಟ್ಟಿಗಳನ್ನು ತಯಾರಿಸುವಂತೆ ಸೂಚಿಸಲಾಗಿದೆ.
ರಾಜ್ಯದ ಆರೋಗ್ಯ ಇಲಾಖೆ ಈ ಅಂಕಿ - ಅಂಶಗಳ ಗಮನ ಹರಿಸಬೇಕು. ಶಾಖಾ ಸಂಬಂಧಿತ ಸಮಸ್ಯೆಗಳ ನಿರ್ವಹಣೆಗೆ ಆರೋಗ್ಯ ಅಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಬಿಸಿಲಿನ ಬೇಗೆಯ ಸಮಸ್ಯೆ ಅರಿತು ಆರೋಗ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಈ ಸಂಬಂಧ ಎನ್ಸಿಡಿಸಿ ತರಬೇತಿ ಅಭಿವೃದ್ಧಿ ಪಡಿಸಲಿದೆ. ಎಲ್ಲರಿಗೂ ತರಬೇತಿ ಲಭ್ಯವಾಗಿದೆ ಎಂದು ತಿಳಿಸಲಾಗಿದೆ