ಹೈದರಾಬಾದ್ : 'ಉತ್ತಮ, ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು' ಈ ವರ್ಷದ ವಿಶ್ವ ಆರೋಗ್ಯ ದಿನಾಚರಣೆಯ ಕೇಂದ್ರ ಬಿಂದುವಾಗಿದೆ. ಇದನ್ನು ಏಪ್ರಿಲ್ 7ರಂದು ಆಚರಿಸಲಾಗುತ್ತದೆ. ಈ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಆರೋಗ್ಯದ ಅಸಮಾನತೆಗಳನ್ನು ಹೋಗಲಾಡಿಸಲು ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಒಂದು ವರ್ಷವಿಡೀ ಜಾಗತಿಕ ಅಭಿಯಾನದ ಭಾಗವಾಗಿ ಜನರನ್ನು ಒಗ್ಗೂಡಿಸುವ, ಆರೋಗ್ಯಕರ ಜಗತ್ತು ನಿರ್ಮಿಸಲು ಕಾರ್ಯ ನಿರ್ವಹಿಸಲಿದ್ದೇವೆ.
ಈ ಅಭಿಯಾನವು ವಿಶ್ವ ಆರೋಗ್ಯ ಸಂಸ್ಥೆಯ ಸಾಂವಿಧಾನಿಕ ತತ್ವವನ್ನು ಎತ್ತಿ ತೋರಿಸುತ್ತದೆ. ಜನಾಂಗ, ಧರ್ಮ, ರಾಜಕೀಯ ನಂಬಿಕೆ, ಆರ್ಥಿಕ ಅಥವಾ ಸಾಮಾಜಿಕ ಸ್ಥಿತಿಯ ಬೇಧವಿಲ್ಲದೆ ಪ್ರತಿ ಮನುಷ್ಯನ ಮೂಲಭೂತ ಹಕ್ಕುಗಳಲ್ಲಿ ಅತ್ಯುನ್ನತ ಆರೋಗ್ಯದ ಆನಂದ ಪಡೆಯುವುದು ಕೂಡ ಒಂದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ದಿನಾಚರಣೆಯ ಇತಿಹಾಸ :ಡಿಸೆಂಬರ್ 1945ರಲ್ಲಿ, ಬ್ರೆಜಿಲ್ ಮತ್ತು ಚೀನಾ ಎಲ್ಲರನ್ನೂ ಒಳಗೊಳ್ಳುವ ಮತ್ತು ಸ್ವತಂತ್ರ ಅಂತಾರಾಷ್ಟ್ರೀಯ ಆರೋಗ್ಯ ಸಂಘಟನೆಯೊಂದನ್ನು ರೂಪಿಸಲು ಪ್ರಸ್ತಾಪಿಸಿದವು. ಬಳಿಕ ಜುಲೈ 1946ರಲ್ಲಿ ನ್ಯೂಯಾರ್ಕ್ನಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಲಾಯಿತು ಮತ್ತು ಏಪ್ರಿಲ್ 7, 1948ರಂದು 61 ದೇಶಗಳು ಒಟ್ಟಾಗಿ ಈ ಎನ್ಜಿಒ ರಚನೆಯ ಒಪ್ಪಂದಕ್ಕೆ ಸಹಿ ಹಾಕಿದವು.
ಈ ದಿನವನ್ನು ಮೊದಲು ಜುಲೈ 22ರಂದು 1949ರಲ್ಲಿ ಆಚರಿಸಲಾಯಿತು. ಆದರೆ, ನಂತರ ದಿನಾಂಕವನ್ನು ಏಪ್ರಿಲ್ 7ಕ್ಕೆ ಬದಲಾಯಿಸಲಾಯಿತು. ಅದೇ ದಿನಾಂಕವನ್ನು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಸ್ಥಾಪಿಸಿತು. ಆದ್ದರಿಂದ, 1950ರಲ್ಲಿ ಈ ದಿನವನ್ನು ಮೊದಲ ಬಾರಿಗೆ ಅಧಿಕೃತವಾಗಿ ಆಚರಿಸಲಾಯಿತು.
ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂಕಿ-ಅಂಶಗಳು :20 ವರ್ಷಗಳಲ್ಲಿ ಮೊದಲ ಬಾರಿಗೆ, ಜಾಗತಿಕ ಬಡತನದ ಮಟ್ಟವು ಏರಿಕೆಯಾಗಲಿದೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಪ್ರಗತಿ ತಡೆಯುತ್ತದೆ ಎಂದು ಊಹಿಸಲಾಗಿದೆ. ಕೆಲವು ದೇಶಗಳಲ್ಲಿ ವಾಸಿಸುವ ಶೇ.60ರಷ್ಟು ಜನರಿಗೆ ಅಗತ್ಯ ಆರೋಗ್ಯ ಸೇವೆಗಳ ಲಭ್ಯತೆ ಇಲ್ಲ.
ಅನೌಪಚಾರಿಕ ವಸಾಹತುಗಳಲ್ಲಿ ಅಥವಾ ಕೊಳೆಗೇರಿಗಳಲ್ಲಿ ವಾಸಿಸುವ 1 ಶತಕೋಟಿಗೂ ಹೆಚ್ಚು ಜನ ಸೋಂಕು ಮತ್ತು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ವಿಶ್ವ ಆರೋಗ್ಯ ದಿನ ಮತ್ತು ಹೆಚ್ಚುತ್ತಿರುವ ಸೋಂಕು :ದೇಶವು ಕೋವಿಡ್-19 ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದೆ. ಇಂದು ವಿಶ್ವ ಆರೋಗ್ಯ ದಿನದಂದು ಈಟಿವಿ ಭಾರತ ಸುಖೀಭವ ತಂಡವು ತನ್ನ ಕೆಲ ಪ್ಯಾನಲ್ ವೈದ್ಯರೊಂದಿಗೆ ಮಾತನಾಡಿದೆ.
ಕೋವಿಡ್-19ನ ಎರಡನೇ ಅಲೆಯ ತೀವ್ರತೆಗೆ ಸಂಬಂಧಿಸಿದಂತೆ, ಇಂದೋರ್ನ ಆ್ಯಪಲ್ ಆಸ್ಪತ್ರೆಯ ವೈದ್ಯ ಡಾ. ಸಂಜಯ್ ಕೆ. ಜೈನ್ ಮಾತನಾಡಿದ್ದಾರೆ. ಕೋವಿಡ್-19 ವೈರಲ್ ಸೋಂಕು , ವೈರಸ್ ಯಾವಾಗಲೂ ಕಾಲಾನಂತರದಲ್ಲಿ ಅದರ ರಚನೆ ಬದಲಾಯಿಸುತ್ತದೆ. ಕೊರೊನಾ ವೈರಸ್ ರಚನೆಯೂ ಬದಲಾಗಿದೆ, ವೈರಸ್ ರೂಪಾಂತರಗೊಳ್ಳುತ್ತಿದೆ ಎಂದು ನಾವು ಹೇಳಬಹುದು.
ಬದಲಾದ ರಚನೆಯ ಜೊತೆಗೆ, ವೈರಸ್ ಪರಿಣಾಮ ಬೀರುವ ವಿಧಾನವೂ ಬದಲಾಗಿದೆ. ಆದ್ದರಿಂದ, ಜನ ವೇಗವಾಗಿ ಸೋಂಕಿಗೆ ಒಳಗಾಗುತ್ತಿದೆ ಮತ್ತು ಜನರು ದೇಹದ ನೋವು, ಗಂಟಲು ನೋವು, ಶೀತ ಮತ್ತು ಒಣ ಕೆಮ್ಮು ಸೇರಿ ತೀವ್ರ ರೋಗಲಕ್ಷಣಗಳನ್ನು ಹೊಂದಿದ್ದಾರೆ.
ತೀವ್ರ ರೋಗಲಕ್ಷಣಗಳಿಗೆ ವ್ಯತಿರಿಕ್ತವಾಗಿ, ನಾವು ನೋಡುತ್ತಿರುವ ಇನ್ನೊಂದು ವಿಷಯವೆಂದರೆ, ವೈರಸ್‌ಗೆ ತುತ್ತಾಗಿರುವ ಅನೇಕರು ಲಕ್ಷಣರಹಿತರಾಗಿದ್ದಾರೆ. ಅವರನ್ನು ಪ್ರತ್ಯೇಕಿಸದಿದ್ದರೆ ಅವರು ವೈರಸ್ ವಾಹಕಗಳಾಗಬಹುದು. ಆದರೆ, ತುಲನಾತ್ಮಕವಾಗಿ, ಸಾವಿನ ಪ್ರಮಾಣವು ಕಡಿಮೆಯಾಗಿದೆ ಮತ್ತು ಸೋಂಕಿತರು ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಿರಿಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಹೆಮ್ ಜೋಶಿ ಕೂಡ ಈ ಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಕೊಮೊರ್ಬಿಡಿಟಿ ಹೊಂದಿರುವ ಜನ ಕೊರೊನಾ ವೈರಸ್ನಿಂದ ಹೆಚ್ಚಿನ ಅಪಾಯದಲ್ಲಿದ್ದಾರೆ. ವೈರಸ್ ಸೋಂಕಿಗೊಳಗಾದ ರೋಗಿಗಳನ್ನು ಇಡೀ ಕುಟುಂಬವರು ಹೋಗಿ ಭೇಟಿ ಮಾಡುವ ಸಂಖ್ಯೆ ಹೆಚ್ಚಾಗಿದೆ.
ಸೋಂಕಿತ ವ್ಯಕ್ತಿಯ ಸ್ಥಿತಿ ತೀವ್ರವಾಗಿಲ್ಲದಿದ್ದರೆ, ಮನೆಯಲ್ಲಿ ಪ್ರತ್ಯೇಕವಾಗಿದ್ದು, ವೈದ್ಯರು ಶಿಫಾರಸು ಮಾಡಿದ ಔಷಧಿಗಳನ್ನು ನಿಯಮಿತ ತೆಗೆದುಕೊಂಡು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ಅವರು ತಮ್ಮ ಸ್ಥಿತಿ ನಿರ್ವಹಿಸಬಹುದು ಮತ್ತು ಇತರರಿಗೆ ಸೋಂಕು ತಗುಲದಂತೆ ತಡೆಯಬಹುದು ಎಂದು ಅವರು ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಬಲವಾಗಿರುವುದರಿಂದ ವೈರಸ್ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ನಂಬಲಾಗಿತ್ತು.
ಆದರೆ, ಮಕ್ಕಳ ತಜ್ಞ ವೈದ್ಯರಿಗೆ ಇದೇ ವಿಷಯವನ್ನು ಕೇಳಿದಾಗ, ಮಕ್ಕಳ ವೈದ್ಯೆ ಡಾ. ಸೋನಾಲಿ ನವಲ್, ನಮ್ಮ ದೇಶದಲ್ಲಿ ಮಕ್ಕಳಲ್ಲಿಯೂ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಿವೆ. ರೂಪಾಂತರ ವೈರಸ್ 2-3 ತಿಂಗಳ ಮಗುವಿನಿಂದ ಹಿಡಿದು ಎಲ್ಲಾ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಿವರಿಸಿದ್ದಾರೆ.
ಮಕ್ಕಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಅವರು ಕುಟುಂಬದಲ್ಲಿ ವೈರಸ್ ಹರಡುವ ವಾಹಕಗಳಾಗಬಹುದು ಎಂದು ಇನ್ನೊಬ್ಬ ಶಿಶುವೈದ್ಯ ಡಾ.ಲತಿಕಾ ಜೋಶಿ ಹೇಳುತ್ತಾರೆ. ಆದ್ದರಿಂದ ಮಗುವಿಗೆ ಯಾವುದೇ ಸೌಮ್ಯ ಲಕ್ಷಣಗಳಿದ್ದರೂ ಸಹ ತಕ್ಷಣ ಮಕ್ಕಳನ್ನು ಪರೀಕ್ಷೆಗೊಳಪಡಿಸಿ ಮತ್ತು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ನ ಹೊಸ ಅಲೆಯ ಹಿನ್ನೆಲೆ ಮಾನಸಿಕ ಆರೋಗ್ಯದ ಕುರಿತು ಡೆಹ್ರಾಡೂನ್ ಮೂಲದ ಹಿರಿಯ ಮನಶ್ಶಾಸ್ತ್ರಜ್ಞೆ ಡಾ.ವೀಣಾ ಕೃಷ್ಣನ್ ಮಾತನಾಡಿ, ಕೊರೊನಾ ಪರಿಸ್ಥಿತಿ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ವಿವರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಪ್ರಕರಣಗಳು ಕ್ಷೀಣಿಸಲು ಪ್ರಾರಂಭಿಸಿದಾಗ ಮತ್ತು ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದಾಗ, ಜನರು ತಮ್ಮ ಜೀವನವು ಸಾಮಾನ್ಯ ಸ್ಥಿತಿಗೆ ಸಾಗುತ್ತಿದೆ ಎಂದು ಬಹಳ ಭರವಸೆ ಹೊಂದಿದ್ದರು.
ಆದರೆ, ದೇಶಾದ್ಯಂತ ಹಠಾತ್ ಉಲ್ಬಣದಿಂದಾಗಿ, ಜನರು ಕಳೆದ ಬಾರಿಗಿಂತ ಹೆಚ್ಚು ಖಿನ್ನತೆ ಮತ್ತು ಆತಂಕ ಎದುರಿಸುತ್ತಿದ್ದಾರೆ. ಅವರು ಅಸಹಾಯಕರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ ವೇಗವಾಗಿ ಹರಡುತ್ತಿರುವ ಕೋವಿಡ್-19ನ ಹೊಸ ರೂಪಾಂತರಿಯ ಮಧ್ಯೆ, ನಾವು ನಮ್ಮ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳಬಾರದು. ಆರೋಗ್ಯಕರ ಮತ್ತು ಪೌಷ್ಠಿಕ ಆಹಾರ ಸೇವಿಸಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ನಿಯಮಿತ ವ್ಯಾಯಾಮ ಮಾಡಿ.
ಇದರಿಂದ ವೈರಸ್ ನಿಮ್ಮ ದೇಹದ ಮೇಲೆ ತೀವ್ರ ಪರಿಣಾಮ ಬೀರುವುದಿಲ್ಲ. ಇದಲ್ಲದೆ, ನಿಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ನಕಲಿ ಸೋಷಿಯಲ್ ಮೀಡಿಯಾ ಫಾರ್ವರ್ಡ್ಗಳನ್ನು ನಂಬಬೇಡಿ. ಅಲ್ಲದೆ, ಲಸಿಕೆಗಳ ಬಗ್ಗೆ ನಕಲಿ ಮಾಹಿತಿಯೊಂದಿಗೆ ಜನ ನಿಮ್ಮನ್ನು ದಾರಿ ತಪ್ಪಿಸಲು ಬಂದರೆ ಅದನ್ನು ನಂಬಬೇಡಿ. ಲಸಿಕೆಗಳು ಸುರಕ್ಷಿತವಾಗಿವೆ ಎಂದು ವೈದ್ಯರು, ತಜ್ಞರು ಹಾಗೂ ವಿಜ್ಞಾನಿಗಳೇ ಭರವಸೆ ನೀಡಿದ್ದಾರೆ.