ಮನೆಯಲ್ಲಿ ಕ್ಯಾರೆಟ್ ಇದೆ ಎಂದರೆ ಸಾಕು, ಹಲ್ವಾ ಮಾಡಿ, ಸಿಹಿ ತಿನ್ನುವ ಆಸೆಯನ್ನು ತಣಿಸಿಕೊಳ್ಳುತ್ತೇವೆ. ತಜ್ಞರು ಹೇಳುವಂತೆ ಇದು ಕೇವಲ ನಿಮ್ಮ ಬಾಯಿಗೆ ರುಚಿ ಜೊತೆಗೆ ಆರೋಗ್ಯದ ಹಲವು ಪ್ರಯೋಜನವನ್ನು ಹೊಂದಿದೆ. ಅದರಲ್ಲೂ ಚಳಿಗಾಲದಲ್ಲಿ ಕ್ಯಾರೆಟ್ ಹಲ್ವಾ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ, ತೂಕ ಕಳೆದುಕೊಳ್ಳಲು, ಚಳಿಗಾಲದ ಋತುಮಾನದಲ್ಲಿ ತ್ವಚೆಯ ಆರೋಗ್ಯ ಕಾಪಾಡಲು ಅಗತ್ಯವಾಗಿದೆ. ಈ ಕ್ಯಾರೆಟ್ ಹಲ್ವಾ ಚಳಿಗಾಲದಲ್ಲಿ ಏಕೆ ತಿನ್ನಬೇಕು ಎಂಬ ಕುರಿತ ಮಾಹಿತಿ ಇಲ್ಲಿದೆ.
ಪ್ರತಿ ರಕ್ಷಣಾ ವ್ಯವಸ್ಥೆ ಕಾಪಾಡಲು: ಚಳಿಗಾಲದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ನಿಧಾನವಾಗುತ್ತದೆ. ಅನೇಕ ಅಧ್ಯಯನಗಳು ತೋರಿಸಿರುವಂತೆ ಈ ಸಮಯದಲ್ಲಿ ಹೆಚ್ಚಾಗಿ ಸೂರ್ಯನ ಬೆಳಕಿಗೆ ಮೈಯೊಡ್ಡದಿರುವ ಹಿನ್ನೆಲೆ ವಿಟಮಿನ್ ಡಿ ಕೊರತೆ ಕಾಡುತ್ತದೆ. ಹೀಗಾಗಿ ಬೇಗ ಸೋಂಕಿನ ದಾಳಿ ಕೂಡ ಆಗುತ್ತದೆ. ತಜ್ಞರು ಹೇಳುವಂತೆ ಕ್ಯಾರೆಟ್ ಹಲ್ವಾ ಸೇವನೆ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸಿ, ಸಮಸ್ಯೆಗಳನ್ನು ತಡೆಯುತ್ತದೆ. ಕ್ಯಾರೆಟ್ನಲ್ಲಿ ಬೆಟಾ -ಕ್ಯಾರೊಟೆನ್ ಮತ್ತು ಆ್ಯಂಟಿ ಅಕ್ಸಿಡೆಂಟ್ ಇದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳಿಸಿ, ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಹಲ್ವಾಗೆ ಸೇರಿಸುವ ಹಾಲು, ಏಲಕ್ಕಿ, ಬಾದಾಮಿ, ಗೋಂಡಂಬಿಗಳು ಕೂಡ ಪ್ರತಿಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿ ಅಂಶವನ್ನು ಹೊಂದಿದೆ.
ತೂಕ ನಿಯಂತ್ರಣ:ಚಳಿಗಾಲದಲ್ಲಿ ಚಳಿ ಎಂದು ಬೆಚ್ಚಗಿರುವ ನಾವು ವ್ಯಾಯಾಮವನ್ನು ಕಡಿಮೆ ಮಾಡುತ್ತೇವೆ. ಅಲ್ಲದೇ ನೀರನ್ನು ಹೆಚ್ಚಾಗಿ ಕುಡಿಯುವುದಿಲ್ಲ. ಜೊತೆಗೆ ಹವಾಮಾನ ಬದಲಾವಣೆಯಿಂದ ಹಾರ್ಮೋನ್ಗಳು ಕೂಡ ಅಸಮತೋಲನ ಉಂಟಾಗುತ್ತದೆ. ಇದರ ಪರಿಣಾಮ ತೂಕ ಹೆಚ್ಚಳವಾಗುತ್ತದೆ. ಈ ಅವಧಿಯಲ್ಲಿ ದೇಹಕ್ಕೆ ಶಕ್ತಿ ಮತ್ತು ಉಷ್ಣತೆ ಬೇಕಾಗುತ್ತದೆ. ಈ ಶಕ್ತಿಗಾಗಿ ಹೆಚ್ಚಿನ ಕ್ಯಾಲೋರಿ ಆಹಾರ ಸೇವನೆ ಮಾಡಬೇಕು. ಇದರಿಂದ ನಾವು ತೂಕವನ್ನು ಹೆಚ್ಚಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಕ್ಯಾರೆಟ್ ಹಲ್ವಾ ಹೆಚ್ಚು ಉಪಯುಕ್ತ ತಿನಿಸಾಗಿದೆ. ಇದು ತೂಕ ನಿಯಂತ್ರಣವನ್ನು ಮಾಡುತ್ತದೆ. ಕಾರಣ ಕ್ಯಾರೆಟ್ನಲ್ಲಿನ ಫೈಬರ್ ಅಂಶ ಜೀರ್ಣವಾಗಲು ಸಮಯ ಬೇಕಾಗುತ್ತದೆ. ಈ ಹಿನ್ನೆಲೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ಆಗಿ ಹಸಿವು ಉಂಟಾಗುವುದಿಲ್ಲ.
ನೈಸರ್ಗಿಕ ಮಾಶ್ಚರೈಸರ್: ಚಳಿಗಾಲದಲ್ಲಿ ಚರ್ಮವೂ ಮಾಶ್ಚರೈಸರ್ ಅನ್ನು ಕಳೆದುಕೊಂಡು, ಶುಷ್ಕತೆ ಅನುಭವಿಸುತ್ತೇವೆ. ಇದು ಕೆರೆತ, ಉರಿ, ಚರ್ಮ ಕೆಂಪಾಗುವಿಕೆಗೆ ಕಾರಣವಾಗುತ್ತದೆ. ಒಣ ಚರ್ಮಕ್ಕೆ ಮಾಶ್ಚರೈಸರ್, ಲೋಷನ್ ಏನೇ ಹಚ್ಚಿದರೂ ಆದು ತಾತ್ಕಾಲಿಕ ಪರಿಹಾರ ನೀಡುತ್ತದೆ. ಇವು ಚರ್ಮದ ಒಳಗಿನಿಂದ ಚಿಕಿತ್ಸೆ ನೀಡುವುದಿಲ್ಲ. ಆದರೆ, ಕ್ಯಾರೆಟ್ ಚರ್ಮದೊಳಗಿನಿಂದ ನೈಸರ್ಗಿಕವಾಗಿ ಚರ್ಮವನ್ನು ಮಾಶ್ಚರೈಸರ್ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಇದಕ್ಕೆ ಕಾರಣ ಕ್ಯಾರೆಟ್ನಲ್ಲಿರುವ ವಿಟಮಿನ್ ಎ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹೊಸ ಚರ್ಮ ಕೋಶದ ಅಭಿವೃದ್ಧಿಗೆ ಸಹಾಯ ಆಗುತ್ತದೆ. ಇದರಿಂದ ಚರ್ಮಕ್ಕೆ ಮಾಶ್ಚರೈಸರ್ ಮಾಡಿದರೆ ಹೊಳೆಯುತ್ತದೆ.