ಎದೆ ಹಾಲು ಎಂಬುದು ಮಗುವಿಗೆ ಅಮೃತವಿದ್ದಂತೆ. ಈ ಹಾಲಿನಲ್ಲಿ ಮಗುವನ್ನು ಎಲ್ಲ ರೋಗಗಳ ವಿರುದ್ಧ ರಕ್ಷಣೆ ಮಾಡುವ ಪೋಷಕಾಂಶಗಳು ಇರುತ್ತದೆ. ಕೆಲವು ತಾಯಂದಿರು ಕೆಲಸ ಅಥವಾ ಇನ್ನಿತರ ಕಾರಣಗಳಿಂದ ಮಗುವಿಗೆ ಕೆಲವೇ ತಿಂಗಳ ಬಳಿಕ ಎದೆ ಹಾಲನ್ನು ತಪ್ಪಿಸಿ, ಬಟಲ್ ಹಾಲನ್ನು ಅಭ್ಯಾಸ ಮಾಡುತ್ತಾರೆ. ಆದರೆ, ಈ ರೀತಿ ಮಾಡುವುದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಉತ್ತಮವಲ್ಲ. ಇದೇ ಕಾರಣಕ್ಕೆ ತಾಯಿ ಹಾಲಿನ ಮಹತ್ವ ಸಾರುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 1ರಿಂದ 7ರವರೆಗೆ ಸ್ತನಪಾನದ ಸಪ್ತಾಹವಾಗಿ ಆಚರಣೆ ಮಾಡಲಾಗುವುದು. ಈ ಮೂಲಕ ಎದೆ ಹಾಲು ಉಣಿಸುವುದು ಮಗುವಿಗೆ ಮತ್ತು ತಾಯಿಗೆ ಯಾಕೆ ಮಹತ್ವದ್ದು ಎಂಬುದರ ಕುರಿತು ಜಾಗೃತಿ ಮೂಡಿಸಲಾಗುವುದು. ಈ ಉದ್ದೇಶದಿಂದ ತಾಯಿ ಮತ್ತು ಮಗುವಿಗೆ ಈ ಸ್ತನಪಾನದ ಪ್ರಮುಖ ಪ್ರಯೋಜನವನ್ನು ತಿಳಿಸಲಾಗಿದೆ
ಮಗುವಿಗೆ ಎದೆ ಹಾಲಿನಿಂದಾಗುವ ಪ್ರಯೋಜನ:- ತಾಜಾ ಸಮೃದ್ದ ಹಾಲು:ಯಾವುದೇ ವಯಸ್ಸಿನವರಾದರೂ ತಾಜಾ ಆಹಾರ ಸೇವನೆ ಆರೋಗ್ಯಕರ. ಅದು ಶಿಶುಗಳಿಗೂ ಅನ್ವಯವಾಗುತ್ತದೆ. ಸ್ತನಪಾನವೂ ಮಗುವಿಗೆ ಬೇಕಾದಾಗ ತಾಜಾವಾಗಿ ಮತ್ತು ಮಗುವಿಗೆ ಅನುಸಾರದ ತಾಪಮಾನದಲ್ಲಿ ಲಭ್ಯವಾಗುತ್ತದೆ. ಹೆಚ್ಚಾಗಿ ಇದು ಯಾವುದೇ ಹಾನಿಕಾರಕ ಅಂಶವನ್ನು ಹೊಂದಿಲ್ಲ. ಹೀಗಾಗಿ ಎದೆ ಹಾಲು ಸೇವಿಸಿದ ಮಕ್ಕಳು ಸುರಕ್ಷಿತ ಮತ್ತು ಆರೋಗ್ಯಕರ ಬೆಳವಣಿಗೆ ಕಾಣುತ್ತಾರೆ.
ಚಯಪಚಯನ ವ್ಯವಸ್ಥೆ ಬಲ: ಮಗು ಜನಿಸಿದ ನಾಲ್ಕು ಮತ್ತು ಐದು ದಿನದಲ್ಲಿ ತಾಯಿ ಎದೆಯಲ್ಲಿ ಹಾಲಿನ ಉತ್ಪಾದನೆ ಆಗುತ್ತದೆ. ಇದನ್ನು ಮುರ್ರು ಪಲು ಎಂದು ಕರೆಯಲಾಗುವುದು. ಇದು ಮಗುವನ್ನು ಅಲರ್ಜಿ ಮತ್ತು ಸೋಂಕಿನಿಂದ ರಕ್ಷಣೆ ಮಾಡುತ್ತದೆ. ಜೊತೆಗೆ ಈ ಹಾಲು ಮಗುವಿನ ಚಯಪಚಯನ ವ್ಯವಸ್ಥೆಯನ್ನು ರಕ್ಷಣೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆ ಹಾಲು ಮಗುವಿನ ಆರೋಗ್ಯ ಮತ್ತು ರಕ್ಷಣೆಯಲ್ಲಿ ಅತ್ಯವಶ್ಯಕವಾಗಿದೆ.
ಬುದ್ದಿವಂತಿಕೆ ಅಭಿವೃದ್ಧಿ: ಎದೆ ಹಾಲನ್ನು ಕುಡಿದು ಬೆಳೆದ ಮಕ್ಕಳ ಮಿದುಳು ಹೆಚ್ಚು ಕ್ರಿಯಾಶೀಲವಾಗಿದ್ದು, ಮಕ್ಕಳು ಉತ್ತಮ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಕಾಣುತ್ತಾರೆ ಎಂಬುದನ್ನು ಈಗಾಗಲೇ ಅನೇಕ ಅಧ್ಯಯನಗಳು ತಿಳಿಸಿದೆ. ಈ ಹಿನ್ನೆಲೆ ಮಗುವಿನ ಭವಿಷ್ಯದ ಬೆಳವಣಿಗೆಯಲ್ಲೂ ಇದು ಅತ್ಯಗತ್ಯವಾಗಿದೆ.
ಪೋಷಕಾಂಶದ ಆಗರ: ತಾಯಿಯ ಹಾಲಿನಲ್ಲಿ ಸಮೃದ್ಧವಾದ ವಿಟಮಿನ್, ಮಿನರಲ್ಸ್, ಪ್ರೋಟಿನ್, ಕಾರ್ಬೋಹೈಡ್ರೇಟ್ಸ್ ಮುಂತಾದ ಅಂಶಗಳು ಇರುತ್ತದೆ. ಇದು ದೇಹಕ್ಕೆ ಅವಶ್ಯಕವಾದ ಕೊಬ್ಬನ್ನು ನೀಡುತ್ತದೆ. ಈ ಎಲ್ಲ ಅಂಶಗಳು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಎದೆ ಹಾಲು ಸುಲಭವಾಗಿ ಜೀರ್ಣವಾಗುವುದರ ಜೊತೆಗೆ ಮಗುವಿಗೆ ಮಲಬದ್ಧತೆ ಸಮಸ್ಯೆ ಎದುರಾಗುವುದಿಲ್ಲ.
ತೂಕ ನಿರ್ವಹಣೆ: ಮಗುವಿನ ಬೆಳವನಿಗೆಯಲ್ಲಿ ಅವಶ್ಯವಾಗುವ ತೂಕ ನಿರ್ವಹಣೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಇದು ಮಗುವನ್ನು ಅಧಿಕ ತೂಕ ಮತ್ತು ಸ್ಥೂಲಕಾಯತೆಯಿಂದ ಪಾರು ಮಾಡಲು ಕೂಡ ಸಹಾಯ ಮಾಡುತ್ತದೆ
ಆರು ತಿಂಗಳ ಬಳಿಕ: ಮಗುವಿಗೆ ಆರು ತಿಂಗಳು ಆಗುವವರೆಗೂ ಎದೆ ಹಾಲು ಉತ್ತಮ ಆಹಾರವಾಗಿದೆ. ಬಹುತೇಕ ಮಕ್ಕಳು ಆರು ತಿಂಗಳ ಬಳಿಕ ಗಟ್ಟಿ ಆಹಾರವನ್ನು ಸೇವಿಸಲು ಶುರು ಮಾಡುತ್ತಾರೆ. ಇದರ ಆಧಾರದ ಮೇಲೆ ಎದೆ ಹಾಲನ್ನು ನಿಲ್ಲಿಸಬಹುದು. ಜೊತೆಗೆ ಮಕ್ಕಳು ಎಲ್ಲ ರೀತಿಯ ಪೋಷಕಾಂಶವನ್ನು ಪಡೆಯುತ್ತವೆ. ಆರು ತಿಂಗಳ ಬಳಿಕವೂ ಮಗುವಿಗೆ ಗಟ್ಟಿ ಆಹಾರದ ಜೊತೆಗೆ ಎದೆಹಾಲನ್ನು ಆಗ್ಗಿಂದಾಗ್ಗೆ ಕುಡಿಸಬಹುದು. ಒಂದು ವರ್ಷದವರೆಗೆ ಹಾಲೂಣಿಸುವುದು ತಾಯಿ ಮತ್ತು ಮಗುವಿಗೆ ಇಬ್ಬರಿಗೂ ಉತ್ತಮ.
ಉತ್ತಮ ಬಾಂಧವ್ಯ: ತಜ್ಞರು ಹೇಳುವಂತೆ ಹಾಲೂಣಿಸುವುದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ವೃದ್ಧಿಯಾಗುತ್ತದೆ. ಮಕ್ಕಳು ಹಾಲು ಸೇವಿಸುವಾಗ ತಾಯಿಯ ಪ್ರೀತಿ ಮತ್ತು ಪ್ರೇಮವನ್ನು ಮಕ್ಕಳು ಅನುಭವಿಸುತ್ತದೆ. ಜೊತೆಗೆ ಅವರು ಸುರಕ್ಷಿತ ಎಂಬ ಮನೋಭಾವ ಮೂಡುತ್ತದೆ. ಈ ಎಲ್ಲ ಭಾವನೆಗಳು ತಾಯಿ ಮತ್ತು ಮಕ್ಕಳ ಬಾಂಧವ್ಯ ವೃದ್ಧಿಯಲ್ಲಿ ಪ್ರಮುಖವಾಗುತ್ತದೆ.
ಇನ್ನೂ ಹಲವು ಪ್ರಯೋಜನ ಇದೆ
- ತಜ್ಞರ ಪ್ರಕಾರ, ಸ್ತನಪಾನ್ಯದಿಂದ ಹೃದಯ ಸಂಬಂಧಿ ಸಮಸ್ಯೆ ಮತ್ತು ಕ್ಯಾನ್ಸರ್ ಅಪಾಯವನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಹುದು
- ಮಗುವಿನ ಪ್ರತಿರಕ್ಷಣಾ ವ್ಯವಸ್ಥೆ ವೃದ್ಧಿಯಲ್ಲೊ ಸ್ತನಪಾನ ಪ್ರಮುಖ ಪಾತ್ರವಹಿಸುತ್ತದೆ
- ಕೆಲವು ಸಂಶೋಧನೆ ಹೇಳುವಂತೆ ಸ್ತನಪಾನ ಮಾಡುವ ಮಕ್ಕಳಲ್ಲಿ ಎಲ್ಲ ರೀತಿಯ ಲಸಿಕೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ.
- ಕೆಲವು ಅಧ್ಯಯನ ಪ್ರಕಾರ, ಸ್ತನಪಾನ ಮಾಡುವ ಮಕ್ಕಳಲ್ಲಿ ಮಧುಮೇಹ ಅಭಿವೃದ್ಧಿ ಕಡಿಮೆಯಾಗುತ್ತದೆ.
ಹಾಲು ಉಣಿಸುವುದರಿಂದ ತಾಯಂದಿರಿಗೆ ಆಗುವ ಪ್ರಯೋಜನ:ಎದೆ ಹಾಲು ಕುಡಿಯುವುದರಿಂದ ಮಗುವಿಗೆ ಹೇಗೆ ಸಾಕಷ್ಟು ಲಾಭವಿದೆಯೋ ಅದೇ ರೀತಿ ತಾಯಿಗೂ ಲಾಭ ಇದೆ. ಮಗುವು ಎದೆ ಹಾಲನ್ನು ಎಳೆದುಕೊಳ್ಳುವಾಗ ಉಂಟಾಗುವ ತಾಯಿಯ ಮಿದುಳಿನಲ್ಲಿ ಆಕ್ಸಿಟೊಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಹಾಲಿನ ಹರಿವಿಗೆ ಮಾತ್ರ ಸಹಾಯ ಮಾಡುವುದಿಲ್ಲ. ಇದರಿಂದ ಗರ್ಭಾಶಯವೂ ಸಂಕುಚಿತಗೊಳ್ಳುತ್ತದೆ. ಪ್ರಸವದ ಬಳಿಕ ಉಂಟಾಗುವ ರಕ್ತಸ್ರಾವವನ್ನು ಇದು ಕಡಿಮೆ ಮಾಡುತ್ತದೆ. ಬಹುತೇಕ ತಾಯಂದಿರ ಸಾವಿಗೆ ನಿರಂತರ ರಕ್ತಸ್ರಾವ ಕಾರಣವಾಗುತ್ತದೆ.
- ಪ್ರಸವದ ಬಳಿಕ ಉಂಟಾಗುವ ಒತ್ತಡ, ಆತಂಕ ಮತ್ತು ಖಿನ್ನತೆ ಸೇರಿದಂತೆ ಹಲವು ಅಂಶಗಳನ್ನು ಇದು ತಡೆಯುತ್ತದೆ
- ಹಾಲೂಣಿಸುವುದರಿಂದ ಗರ್ಭಿಣಿ ಸಮಯದಲ್ಲಿ ಹೆಚ್ಚಾದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಮಗು ಹಾಲು ಕುಡಿಯುವಾ ಹೆಚ್ಚಿನ ಕ್ಯಾಲೋರಿ ಕರಗುತ್ತದೆ. ಇದರಿಂದ ತಾಯಿಯ ತೂಕವೂ ಕರಗುತ್ತದೆ
- ಹಾಲೂಣಿಸುವುದರಿಂದ ತಾಯಿಯಲ್ಲೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಬಹುದು
- ಹಾಲೂಣಿಸುವುದರಿಂದ ನಿದ್ರೆ ಕೂಡ ಆರಾಮದಾಯಕವಾಗುತ್ತದೆ. ಇದು ಮಾನಸಿಕ ಆರೋಗ್ಯ ಮತ್ತು ಭಾವನೆಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ
- ಹಾಲೂಣಿಸುವುದರಿಂದ ತಾಯಿಯ ಋತುಚಕ್ರ ನಿಧಾನವಾಗಿ ಆರಂಭವಾಗುತ್ತದೆ. ಅಲ್ಲದೇ, ಮತ್ತೆ ಗರ್ಭಿಣಿಯಾಗುವ ಸಂಭವವನ್ನು ಇದು ಕಡಿಮೆ ಮಾಡುತ್ತದೆ
- ಹಾಲೂಣಿಸುವುದರಿಂದ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಹೃದಯ ರೋಗವನ್ನು ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Breastfeeding: ಹಾಲುಣಿಸುವಾಗ ತಾಯಂದಿರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?